ಜಿಲ್ಲೆ

ಮೆಡಿಕಲ್ ಕಾಲೇಜು ಕಾಮಗಾರಿ ಶೇ.30 ಪೂರ್ಣ, 2022ರ ಜೂ.27ರಂದು ಅಧಿಕೃತವಾಗಿ ಕಾರ್ಯಾರಂಭ

ಚಿಕ್ಕಬಳ್ಳಾಪುರ: ನಾಡಪ್ರಭು ಕೆಂಪೇಗೌಡ ಜಯಂತಿ ದಿನದಂದು ಮೆಡಿಕಲ್ ಕಾಲೇಜು ಉದ್ಘಾಟನೆಯಾಗಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ.ಸುಧಾಕರ್ ತಿಳಿಸಿದರು.

ನಗರದ ಸಿದ್ದೇಶ್ವರ ಸಮುದಾಯದ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿ, ಮುಂಬರುವ 2022ರ ಜೂ.27ರಂದು ಅಧಿಕೃತವಾಗಿ ಕಾಲೇಜು ಕಾರ್ಯಾರಂಭ ಮಾಡಲಿದ್ದು ಈಗಾಗಲೇ ಶೇ.30 ಕಾಮಗಾರಿ ಮುಗಿದಿದೆ ಎಂದರು.

ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಸರ್ಕಾರ 600 ಕೋಟಿ ರೂ. ಮಂಜೂರು ಮಾಡಿದೆ. ಇನ್ನು 5 ಕಡೆ ಹೊಸ ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಿದ್ದು ನಾಯನಹಳ್ಳಿ, ದಿಬ್ಬೂರು, ಮಂಡಿಕಲ್ಲು ಮತ್ತು ಪೆರೇಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲಾಗುತ್ತದೆ. 24 ಗಂಟೆ ಕಾರ್ಯ ನಿರ್ವಹಿಸುವಂತಾಗಲು 8.5 ಕೋಟಿ ರೂ.ವೆಚ್ಚದ ಯೋಜನೆ ರೂಪಿಸಲಾಗಿದೆ. ತಲಾ ಮೂವರು ವೈದ್ಯರು, ಶುಶ್ರೂಷಕಿ, ಪ್ಯಾರಾ ಮೆಡಿಕಲ್ ಸಹಿತ ಇತರ ಸಿಬ್ಬಂದಿ ನಿಯೋಜಿಸಲಾಗುತ್ತದೆ ಎಂದರು.

ಪ್ರತಿ ಹೋಬಳಿಗೊಂದು ವಸತಿ ಶಾಲೆ ಆರಂಭಕ್ಕೆ ನಿರ್ಧರಿಸಿದ್ದು ಈಗಾಗಲೇ ತಿಪ್ಪೇನಹಳ್ಳಿಯಲ್ಲಿ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದೆ. ನಂದಿಯಲ್ಲಿ ಅಂಗಟ್ಟ, ಮಂಚೇನಹಳ್ಳಿಯ ರೇಣುಮಾಕನಹಳ್ಳಿಯಲ್ಲಿ ನಿರ್ಮಾಣಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ. ದೊಡ್ಡಪೈಲುಗುರ್ಕಿಯಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಈಗಾಗಲೇ ನಗರದ ಎಂ.ಜಿ.ರಸ್ತೆಯನ್ನು ಜಿಲ್ಲಾಧಿಕಾರಿ ಕಚೇರಿಯವರೆಗೆ ಆರು ಪಥದ ರಸ್ತೆಯಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿಗೂ ಅನುಮೋದನೆ ನೀಡಲಾಗಿದೆ. 250 ಕಿ.ಮೀ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.