ಜಿಲ್ಲೆ

ಮೆಗಾ-ಲೋಕ್ ಅದಾಲತ್‌ನಲ್ಲಿ 74,307 ಪ್ರಕರಣಗಳು ಇತ್ಯರ್ಥ

ಚಾಮರಾಜನಗರ: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಜಿಲ್ಲಾದ್ಯಂತ ಮಾ. 8ರಂದು ನಡೆಸಿದ ಮೆಗಾ ಲೋಕ್-ಅದಾಲತ್‌ನಲ್ಲಿ 74307ಪ್ರಕರಣಗಳು ಇತ್ಯರ್ಥಗೊಂಡಿವೆ.

ಎಲ್ಲ ರೀತಿಯ ಸಿವಿಲ್ ಹಾಗೂ ರಾಜಿಯಾಗಬಲ್ಲ ಕ್ರಿಮಿನಲ್ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಲು ಮೆಗಾ-ಲೋಕ್ ಅದಾಲತ್ ಏರ್ಪಡಿಸಲಾಗಿತ್ತು. ಚಾಮರಾಜನಗರದಲ್ಲಿ 272, ಯಳಂದೂರಿನಲ್ಲಿ 303, ಕೊಳ್ಳೇಗಾಲದಲ್ಲಿ 839 ಮತ್ತು ಗುಂಡ್ಲುಪೇಟೆಯಲ್ಲಿ 184 ಪ್ರಕರಣಗಳು ಸೇರಿ ಒಟ್ಟು 1598 ನ್ಯಾಯಾಲಯ ಪ್ರಕರಣಗಳು ಹಾಗೂ 72,709 ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿ ಒಟ್ಟಾರೆ 74,307 ಪ್ರಕರಣಗಳು ಲೋಕ್ ಅದಾಲತ್ ನಲ್ಲಿ ತೀರ್ಮಾನಗೊಂಡಿವೆ.

ನ್ಯಾಯಾಲಯದ 1598 ಇತ್ಯರ್ಥ ಪ್ರಕರಣಗಳು 7,82,73,297 ರೂಗಳು ಮೌಲ್ಯದ್ದಾಗಿದೆ.ವ್ಯಾಜ್ಯ ಪೂರ್ವ 72,709 ಇತ್ಯರ್ಥ ಪ್ರಕರಣಗಳು 5,24,59,921 ರೂಗಳ ಮೌಲ್ಯದ್ದಾಗಿದೆ.ಒಟ್ಟಾರೆ 74,307 ಪ್ರಕರಣಗಳು 13,07,33,218 ರೂಗಳ ಮೌಲ್ಯದ್ದಾಗಿದೆ.

ಲೋಕ್ ಅದಾಲತ್‌ನಲ್ಲಿ ಹೆಚ್ಚಿನ ಪ್ರಕರಣಗಳು ಇತ್ಯರ್ಥಗೊಂಡಿದ್ದು, ಜನ ಸಾಮಾನ್ಯರಿಗೆ ಅನುಕೂಲವಾಗಿರುವುದಲ್ಲದೆ ನ್ಯಾಯಾಲಯಗಳ ಮೇಲಿನ ಪ್ರಕರಣಗಳ ಹೊರೆ ತಗ್ಗಿದೆ. ಲೋಕ್ ಅದಾಲತ್ ಯಶಸ್ಸಿಗೆ ಶ್ರಮಿಸಿದ ಜಿಲ್ಲೆಯ ಎಲ್ಲರಿಗೂ ಪ್ರಾಧಿಕಾರದ ವತಿಯಿಂದ ತುಂಬು ಹೃದಯದಿಂದ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.