ಚಿಕ್ಕಬಳ್ಳಾಪುರ: ಸಮೃದ್ಧ ಮಳೆಯ ನಡುವೆ ಜಿಲ್ಲೆಯಲ್ಲಿ ಮೆಕ್ಕೆಜೋಳಕ್ಕೆ ಜಾಡಿ ಹುಳುವಿನ ಬಾಧೆ ಕಾಣಿಸಿಕೊಂಡಿದ್ದು ಮುಂಜಾಗ್ರತಾ ಕ್ರಮಗಳ ಮೂಲಕ ಹತೋಟಿಗೆ ಕೃಷಿ ಇಲಾಖೆ ರೈತರಿಗೆ ಸಲಹೆ ನೀಡಿದೆ.
ಬೆಳೆಗಳನ್ನು ನಾಶ ಮಾಡುವ ಜಾಡಿ ಹುಳು ಬಾಧೆ ಸಾಮಾನ್ಯವಾಗಿ ಅಮೆರಿಕಾ, ಚಿಲಿ, ಕೆನಡಾ, ಅರ್ಜೆಂಟೈನಾ, ಅಫ್ರಿಕಾದ ಹಲವು ರಾಷ್ಟ್ರಗಳಲ್ಲಿ ಕಂಡು ಬರುತ್ತದೆ. ಇತ್ತೀಚಿನ ವರ್ಷಗಳಲ್ಲಿ ದೇಶದ ಹಲವು ಭಾಗಗಳಲ್ಲಿ ಈ ಹುಳುವಿನ ಕಾಟ ಕಾಡುತ್ತಿದ್ದು ಬೆಳೆ ರಕ್ಷಿಸಿಕೊಳ್ಳಲು ರೈತರು ಹೈರಾಣರಾಗುತ್ತಿದ್ದಾರೆ.
ಜೋಳದ ಸುಳಿಯಲ್ಲಿ ಹುಳು : ಅನೇಕ ಬೆಳೆಗಳಿಗೆ ಈ ಹುಳು ಬಾಧಿಸುವುದು ಒಂದೆಡೆಯಾದರೆ ಇದೀಗ ಇದರ ಹೊಸ ಪ್ರಭೇದ ಮೆಕ್ಕೆಜೋಳದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತಿದೆ. ಹುಳು ಜೋಳದ ಸುಳಿಗೆ ನಿಧಾನವಾಗಿ ಸೇರಿಕೊಳ್ಳುತ್ತದೆ. ಒಂದು ಹುಳು ಕನಿಷ್ಠ 1 ಸಾವಿರ ಮೊಟ್ಟೆ ಇಡಲಿದ್ದು, ಜೀವನಚಕ್ರ 1 ತಿಂಗಳಲ್ಲಿ ಮುಗಿದು ಹುಳು ಸಂಖ್ಯೆ ಹೆಚ್ಚಾಗುತ್ತವೆ. ಎಲೆಗಳನ್ನು ತಿಂದು ಹಾಕುತ್ತವೆ. ಪ್ರಾರಂಭದಲ್ಲಿಯೇ ಸೂಕ್ತ ಔಷಧ ಸಿಂಪಡಿಸಿ ನಿಯಂತ್ರಿಸದಿದ್ದರೆ ಗಿಡವೇ ನಾಶವಾಗುತ್ತದೆ ಎಂದು ಇಲಾಖೆ ಎಚ್ಚರಿಸಿದೆ.
ಪಾಷಾಣ ತಯಾರಿಕೆ ಮಾಹಿತಿ: ಹುಳು ಪಾಷಾಣ ತಯಾರಿಕೆಗೆ 10 ಕಿಲೋಗ್ರಾಂ ಭತ್ತದ ತೌಡು ಅಥವಾ ಗೋಧಿ ತೌಡು ಜತೆಗೆ 2 ಕಿ.ಗ್ರಾಂ ಬೆಲ್ಲ ಚೆನ್ನಾಗಿ ಬೆರೆಸಿ, 8 ಗಂಟೆಗಳ ಕಾಲ ಮುಚ್ಚಿಡಬೇಕು. ಬಳಿಕ ಬೆಳೆಗೆ ಹಾಕುವಾಗ 100 ಗ್ರಾಂ ಲಾರ್ವಿನ್ ಅಥವಾ ಮೆಲಾಥಿಯಾನ್ ಸೇರಿಸಿ, ಸುಳಿಯ ಒಳಗೆ ಬಿಡಬೇಕು. ಕೀಟದ ಪತಂಗಗಳನ್ನು ಸಾಮೂಹಿಕವಾಗಿ ಆಕರ್ಷಿಸಿ ನಿರ್ವಹಿಸಲು ಪ್ರತಿ ಎಕೆರೆಗೆ 12-15 ಮೋಹಕ ಬಲೆಗಳನ್ನು ಅಳವಡಿಸಬೇಕು. ಔಷಧ ನಿರ್ವಹಣೆಗೆ ಅಜಾಡಿರೆಕ್ಟಿನ್ ಶೇ.5 ಅನ್ನು 3 ಮಿ.ಲೀ, ಸ್ಟೈನೋಟರಮ್ 11.7 ಎಸ್.ಸಿ 0.5 ಮಿ.ಲೀ, ಕ್ಲೊರಾಂಟ್ರಿನೀಲಿಪ್ರೋಲ್ 18.5 ಎಸ್.ಸಿ 0.4 ಮಿ.ಲೀ, ಎಮಾಮೆಕ್ಟಿನ್ ಬೆಂಜೋಯೇಟ್ 5 ಎಸ್.ಜಿ 0.4 ಗ್ರಾಂ, ಅಜಾಡಿರೆಕ್ಟಿನ್ 10,000 ಪಿಪಿಎಂ 2 ಗ್ರಾಂ, ನ್ಯುಮುರಿಯಾರಿಲೇ ಶಿಲೀಂಧ್ರ 2 ಗ್ರಾಂ ಅನ್ನು ಒಂದು ಲೀಟರ್ ನೀರಿಗೆ ಬೆರೆಸಿ ಬೆಳೆಗೆ ಸಿಂಪಡಿಸುವ ಮೂಲಕ ಹುಳುಬಾಧೆ ನಿಯಂತ್ರಿಸಬಹುದಾಗಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.
ಹುಳುವಿನ ಸಮಸ್ಯೆ, ಬೆಳೆ ನಾಶದ ಬಗ್ಗೆ ರೈತರು ಸಮರ್ಪಕವಾಗಿ ಮಾಹಿತಿ ತಿಳಿದುಕೊಂಡು ಹತೋಟಿ ಕ್ರಮಗಳನ್ನು ಕೈಗೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ ಇಲ್ಲವೇ ಕೃಷಿ ಇಲಾಖೆ ಕಚೇರಿ ಸಂಪರ್ಕಿಸಬಹುದು. ಎಲ್.ರೂಪಾ, ಜಂಟಿ ಕೃಷಿ ನಿರ್ದೇಶಕಿ