ಕೊಟ್ಟೂರು: ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಬೆಲೆ ಕುಸಿದ ಹಿನ್ನೆಲೆಯಲ್ಲಿ ರೈತರು ಕಂಗಾಲಾಗಿದ್ದಾರೆ. ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸದಿರುವುದು ರೈತರ ಆಕ್ರೋಶಕ್ಕೆ ಕಾಣವಾಗಿದೆ.
ಕೇಂದ್ರ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಾಲ್ ಮೆಕ್ಕೆಜೋಳಕ್ಕೆ 2400 ರೂ. ಪ್ರಕಟಿಸಿದೆ. ಆದರೆ, ಪಟ್ಟಣದ ಎಪಿಎಂಸಿಯಲ್ಲಿ ಖರೀದಿದಾರರು ಹಾಗೂ ದಲ್ಲಾಳಿಗಳು 1450 ರೂ.ಯಿಂದ 1920 ರೂ.ಗೆ ಖರೀದಿ ಮಾಡುತ್ತಿದ್ದು, ರೈತರು ನಷ್ಟ ಅನುಭವಿಸುವಂತಾಗಿದೆ.
ಬೆಲೆ ಕುಸಿತ ಹಿನ್ನೆಲೆಯಲ್ಲಿ ಪಟ್ಟಣದ ಎಪಿಎಂಸಿ ಆಡಳಿತ ಸಮಿತಿ ಅಧ್ಯಕ್ಷ ಹರಾಳು ನಂಜಪ್ಪ, ಬೆಂಬಲ ಬೆಲೆ ಯೋಜನೆಯಡಿ ಶೀಘ್ರ ಖರೀದಿ ಕೇಂದ್ರ ಆರಂಭಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಜಿಲ್ಲಾಡಳಿತವೂ ರೈತರ ಹಿತದೃಷ್ಟಿಯಿಂದ ಬೆಂಬಲ ಬೆಲೆ ಯೋಜನೆಯಡಿ ಎಫ್‌ಎಕ್ಯೂ ಗುಣಮಟ್ಟದ ಮೆಕ್ಕೆಜೋಳ ಖರೀದಿಸಲು ಖರೀದಿ ಕೇಂದ್ರ ಆರಂಭಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.