ಜಿಲ್ಲೆ

ಮೆಕ್ಕೆಜೋಳಕ್ಕೆ ಸಿಗದ ಬೆಂಬಲ ಬೆಲೆ

ಓರ್ವಿಲ್ ಫರ್ನಾಂಡೀಸ್ ಹಳಿಯಾಳ

ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ತಂದರೂ ರೈತರು ಬೆಳೆದ ಹಾರ ಉತ್ಪನ್ನಗಳಿಗೆ ಬೆಲೆ ಇಲ್ಲದಂತಾಗಿದೆ. ಮೆಕ್ಕೆಜೋಳದ ಸ್ಥಿತಿಯಂತೂ ಆಯೋಮಯ. ರೈತರು ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ಮೆಕ್ಕೆಜೋಳ ಮಾರಾಟ ಮಾಡಬೇಕಾದ ಸ್ಥಿತಿ ಬಂದಿದೆ.

ಸರ್ಕಾರ ಮೆಕ್ಕೆಜೋಳಕ್ಕೆ 1,850 ರೂ. ಬೆಂಬಲ ಬೆಲೆ ಘೊಷಿಸಿದೆ. ಆದರೆ, ತಾಲೂಕಿನಲ್ಲಿ ಕ್ವಿಂಟಾಲ್​ಗೆ 1,300 ರೂ.ಗಳಿಂದ 1330 ರೂ.ಗೆ ಮೆಕ್ಕೆಜೋಳದ ಖರೀದಿ ನಡೆದಿದೆ. ಸ್ಪರ್ಧಾತ್ಮಕ ಮಾರುಕಟ್ಟೆ ಹಾಗೂ ಖರೀದಿದಾರರು ಇಲ್ಲದೆ ಇರುವುದರಿಂದ ರೈತರು ಬೆಂಬಲ ಬೆಲೆಗಿಂತ ಅಂದಾಜು ರೂ. 520-550 ಕಡಿಮೆ ದರದಲ್ಲಿ ಮೆಕ್ಕೆಜೋಳ ಮಾರಾಟ ಮಾಡುತ್ತಿದ್ದಾರೆ.

ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ರೈತರು ಇನ್ಮುಂದೆ ಎಪಿಎಂಸಿಗೆ ಹೋಗಬೇಕಿಲ್ಲ. ಮಾರುಕಟ್ಟೆಯ ಹೊರಗೂ ಉತ್ಪನ್ನಗಳನ್ನು ಮಾರಾಟ ಮಾಡಿ ಲಾಭ ಗಳಿಸಬಹುದು ಎಂದು ಭರವಸೆ ನೀಡುತ್ತಿದ್ದ ರಾಜಕೀಯ ಮುಖಂಡರು, ಜನಪ್ರತಿನಿಧಿಗಳು ಈಗ ರೈತರಿಗಾಗುವ ಅನ್ಯಾಯದ ಬಗ್ಗೆ ಚಕಾರವೆತ್ತುತ್ತಿಲ್ಲ ಎಂಬ ನೋವು ಅನ್ನದಾತರಲ್ಲಿ ಮಡುಗಟ್ಟಿದೆ.

ಲಾಕ್​ಡೌನ್ ಎಫೆಕ್ಟ್: ಕರೊನಾ ಲಾಕ್​ಡೌನ್ ಪರಿಣಾಮ ಮೆಕ್ಕೆಜೋಳದ ಮೌಲ್ಯವರ್ಧನೆ ಮಾಡುವ ಘಟಕಗಳು ಬಹುತೇಕ ಸ್ಥಗಿತಗೊಂಡಿದೆ. ಉಪ ಉತ್ಪನ್ನಗಳಿಗೆ ಬೇಡಿಕೆ ಕುಸಿದಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಮೆಕ್ಕೆಜೋಳದ ಧಾರಣೆ ಕಡಿಮೆಯಾಗಿದೆ. ಅಲ್ಲದೆ, ಕಳೆದ ವರ್ಷ ಖರೀದಿಸಿದ ಮೆಕ್ಕೆಜೋಳದ ಸಂಗ್ರಹ ಹಾಗೆಯೇ ಉಳಿದಿದ್ದು, ಹೊಸ ಮೆಕ್ಕೆಜೋಳ ಖರೀದಿಸಲು ಉದ್ದಿಮೆಗಳು ಮುಂದಾಗುತ್ತಿಲ್ಲ. ಹೀಗಾಗಿ ಬೆಲೆ ಕುಸಿದಿದೆ ಎಂಬುದು ಖರೀದಿದಾರರ ಅಭಿಪ್ರಾಯವಾಗಿದೆ.

ಖರೀದಿ ಕೇಂದ್ರ ಅನಿಶ್ಚಿತತೆ: ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳ ಧಾರಣೆ ಕುಸಿದಾಗ ಸರ್ಕಾರ ಮಧ್ಯಪ್ರವೇಶಿಸಿ ಬೆಂಬಲ ಬೆಲೆ ಖರೀದಿ ಕೇಂದ್ರ ಸ್ಥಾಪಿಸಿ ರೈತರಿಂದ ನೇರವಾಗಿ ಉತ್ಪನ್ನಗಳನ್ನು ಖರೀದಿಸುತ್ತದೆ. ಆದರೆ, ಈ ಬಾರಿ ಹಂಗಾಮು ಮುಗಿಯಲು ಬಂದರೂ ಖರೀದಿ ಕೇಂದ್ರ ಪ್ರಾರಂಭವಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಇದರಿಂದ ರೈತರಲ್ಲಿ ತಳಮಳ ಶುರುವಾಗಿದೆ.

ಶಾಸಕ ಆರ್.ವಿ. ದೇಶಪಾಂಡೆ, ಸ್ಥಳೀಯ ಮೆಕ್ಕೆಜೋಳ ಬೆಳೆಗಾರರ ದುಸ್ಥಿತಿಯನ್ನು ವಿವರಿಸಿ ಖರೀದಿ ಕೇಂದ್ರ ಆರಂಭಿಸುವಂತೆ ರಾಜ್ಯ ಸರ್ಕಾರಕ್ಕೆ ಸೆಪ್ಟೆಂಬರ್​ನಲ್ಲಿ ಪತ್ರ ಬರೆದಿದ್ದರು. ಮಾಜಿ ಶಾಸಕ ಸುನೀಲ ಹೆಗಡೆ ಕೂಡ ವಾರದೊಳಗೆ ಮೆಕ್ಕೆಜೋಳ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭವಾಗಲಿದೆ ಎಂದು ಸೆ. 28ರಂದು ಹೇಳಿಕೆ ನೀಡಿದ್ದರು. ಹಣಕಾಸಿನ ಕೊರೆತೆಯಿಂದಾಗಿ ರಾಜ್ಯದಲ್ಲಿ ಖರೀದಿ ಕೇಂದ್ರ ತೆರೆಯುತ್ತಿಲ್ಲ ಎಂದು ರಾಜ್ಯ ಸರ್ಕಾರ ಇತ್ತೀಚೆಗೆ ರೈತರ ನಿಯೋಗಕ್ಕೆ ತಿಳಿಸಿದೆ ಎಂಬ ಮಾತು ಬೆಳೆಗಾರರನ್ನು ಚಿಂತೆಗೀಡು ಮಾಡಿದೆ.

ಮೆಕ್ಕೆಜೋಳ ಬೆಳೆದ ರೈತರ ಸಮಸ್ಯೆಗಳು ಹಾಗೂ ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ಆರಂಭಿಸುವ ಕುರಿತು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದೇವೆ. | ವಿಜಯಲಕ್ಷ್ಮೀ ಎಪಿಎಂಸಿ ಶಿರಸಿ ವಿಭಾಗ ಸಹಾಯಕ ನಿರ್ದೇಶಕರು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದರೂ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆಗಿಂತ ಕಡಿಮೆ ಧಾರಣೆ ಯಾಕೆ ನಿಗದಿಯಾಗುತ್ತಿದೆ ಎಂಬ ಪ್ರಶ್ನೆಗೆ ರಾಜ್ಯ ಸರ್ಕಾರವೇ ಉತ್ತರಿಸಬೇಕು. | ಸುರೇಶ ಶಿವಣ್ಣನವರ ಪ್ರಗತಿಪರ ರೈತ