ಬಸವರಾಜ ಇದ್ಲಿ ಹುಬ್ಬಳ್ಳಿ
ಧಾರವಾಡ ಜಿಲ್ಲೆಯಲ್ಲಿ ದಶಕಗಳಿಂದ ಜಲ್ಲಿ ಕಲ್ಲು ಗಣಿಗಾರಿಕೆ ಹಾಗೂ ಕ್ರಷರ್ ಉದ್ಯಮ ನಡೆದುಕೊಂಡು ಬಂದಿದ್ದು, ಬಹುತೇಕ ಕಡೆಗಳಲ್ಲಿ ನಿಯಮಾವಳಿ ಪಾಲನೆಯಾಗದೆ ಸುತ್ತಲಿನ ನಾಗರಿಕರಿಗೆ ತೊಂದರೆ ಮುಂದುವರಿದಿದೆ.
ಧಾರವಾಡ ಜಿಲ್ಲೆಯ ಕಲಘಟಗಿ, ಧಾರವಾಡ, ಹುಬ್ಬಳ್ಳಿ, ಕುಂದಗೋಳ ತಾಲೂಕುಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತದೆ. ಅದರಲ್ಲೂ ಕಲಘಟಗಿ ತಾಲೂಕಿನ ಗಂಭ್ಯಾಪುರ, ಎಮ್ಮೆಟ್ಟಿ, ನಿಂಗನಕೊಪ್ಪ ಧಾರವಾಡ ಜಿಲ್ಲೆಯ ಮಂಡ್ಯಾಳ, ಕವಲಗೇರಿ, ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಮುಂತಾದೆಡೆ ಗಣಿಗಾರಿಕೆ ವ್ಯಾಪಕವಾಗಿದೆ.
ಹಲವು ಕಡೆಗಳಲ್ಲಿ ನಿಯಮಾವಳಿ ಮೀರಿ ಭೂಮಿಯಲ್ಲಿ ಬ್ಲಾಸ್ಟಿಂಗ್ ಮಾಡಲಾಗುತ್ತಿದ್ದು, ಸುಮಾರು 40- 50 ಅಡಿ ಆಳದವರೆಗೂ ಹೊಂಡ ಬಿದ್ದಿವೆ. ಹೀಗೆ ತೋಡಿದ ಹೊಂಡಗಳಲ್ಲಿ ಮಳೆಗಾಲದಲ್ಲಿ ನೀರು ತುಂಬಿ ಅನೇಕ ಅನಾಹುತಗಳೂ ಆಗಿವೆ. ಕೆಲ ವರ್ಷಗಳ ಹಿಂದೆ ಅದರಗುಂಚಿ ಭಾಗದ ಕ್ವಾರಿ ಹೊಂಡದಲ್ಲಿ ಇಬ್ಬರು ಮುಳುಗಿ ಮೃತಪಟ್ಟಿರುವ ಘಟನೆಯೂ ನಡೆದಿದೆ. ಇದೇ ಕಾರಣಕ್ಕೆ ಕಲ್ಲು ಕ್ವಾರಿಗಳು ಕೆಲವೆಡೆ ಮೃತ್ಯುಕೂಪಗಳಾಗಿ ಪರಿವರ್ತನೆಯಾಗಿವೆ ಎಂಬ ದೂರುಗಳು ಸಾಮಾನ್ಯವಾಗಿವೆ.
ಧಾರವಾಡ ಜಿಲ್ಲೆಯಲ್ಲಿ 134 ಕಲ್ಲು ಕ್ವಾರಿಗಳಿವೆ. 56 ಕ್ರಷರ್ ಯುನಿಟ್ಗಳು ನಿತ್ಯ ಕಲ್ಲು ಪುಡಿ ಮಾಡುವ ಕೆಲಸದಲ್ಲಿ ನಿರತವಾಗಿವೆ ಎನ್ನುತ್ತಾರೆ ಅಧಿಕಾರಿಗಳು. ಕ್ವಾರಿಗಳಲ್ಲಿ ಹೊತ್ತು ಮುಳುಗುವ ಹೊತ್ತಲ್ಲಿ ಬ್ಲಾಸ್ಟಿಂಗ್ ನಡೆಸಲಾಗುತ್ತದೆ. ಬ್ಲಾಸ್ಟಿಂಗ್ ಸದ್ದಿಗೆ ಪ್ರಾಣಿ, ಪಕ್ಷಿಗಳು ಓಡಿ ಹೋಗುತ್ತವೆ. ಮೂರ್ನಾಲ್ಕು ಕಿ.ಮೀ. ವ್ಯಾಪ್ತಿಯಲ್ಲಿ ಭೂಮಿ ನಡುಗಿದ ಅನುಭವವಾಗುತ್ತದೆ ಎನ್ನುತ್ತಾರೆ ಕಲಘಟಗಿ ತಾಲೂಕಿನ ಗಂಭ್ಯಾಪುರ ಗ್ರಾಮಸ್ಥರು. ಪಕ್ಕದಲ್ಲೇ ನೀರಸಾಗರ ಜಲಾಶಯ ಇದೆ. ಏನಾದರೂ ಹೆಚ್ಚು ಕಡಿಮೆಯಾದರೆ ಯಾರು ಹೊಣೆ ಎಂಬುದು ಗ್ರಾಮಸ್ಥರ ಅಳಲು.
ಬೆಳೆಗಳಿಗೂ ಹಾನಿ ಕಲ್ಲು ಕ್ವಾರಿ ಇರುವ ಜಮೀನುಗಳ ಸುತ್ತಲಿನ ಹೊಲಗಳಲ್ಲಿ ಬೆಳೆಗಳಿಗೂ ಹಾನಿಯಾಗುತ್ತದೆ. ಕಳೆದ ಹತ್ತಾರು ವರ್ಷಗಳಿಂದ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ಬ್ಲಾಸ್ಟಿಂಗ್ ಮಾಡಿದಾಗ ಕ್ವಾರಿಯ ಕಲ್ಲುಗಳು ಸಿಡಿದು ಪಕ್ಕದ ಹೊಲಗಳಲ್ಲೂ ಬೀಳುತ್ತವೆ. ಚಿಮ್ಮುವ ಧೂಳು ಫಸಲು ಹಾಳುಗೆಡವುತ್ತದೆ. ಸದ್ಯ ಹಿಂಗಾರಿನ ಬೆಳೆಗಳಾದ ಜೋಳ, ಕಡಲೆ, ಸೋಯಾಬೀನ್, ಗೋವಿನ ಜೋಳ, ಶೇಂಗಾ ಇತ್ಯಾದಿ ಬೆಳೆಗಳ ಮೇಲೆ ಕಲ್ಲಿನ ಪುಡಿ, ಧೂಳು ಕುಳಿತುಕೊಳ್ಳುತ್ತಿದೆ. ಇದರಿಂದ ಫಸಲಿನ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಹೊಲದಲ್ಲಿ ಕೆಲಸ ಮಾಡುವವರಿಗೂ ತೊಂದರೆಯಾಗುತ್ತದೆ ಎನ್ನುತ್ತಾರೆ ಎಮ್ಮೆಟ್ಟಿ, ಗಂಭ್ಯಾಪುರ ಗ್ರಾಮಸ್ಥರು.