ತಿ.ನರಸೀಪುರ: ಚಿರತೆ ದಾಳಿಗೊಳಗಾಗಿ ಮೃತಪಟ್ಟ ತಾಲೂಕಿನ ಮದ್ಗಾರ ಲಿಂಗಯ್ಯನಹುಂಡಿ ಗ್ರಾಮದ ವಿದ್ಯಾರ್ಥಿ ಮಂಜುನಾಥ್ ಮನೆಗೆ ಬಿಜೆಪಿ ಮುಖಂಡ ಎಸ್.ಅರವಿಂದ್ ಇತ್ತೀಚೆಗೆ ಭೇಟಿ ನೀಡಿ, ಮೃತನ ತಂದೆ ಚೆನ್ನಮಲ್ಲದೇವರಿಗೆ ಸಾಂತ್ವನ ಹೇಳಿ ವೈಯಕ್ತಿಕ ಧನಸಹಾಯ ಮಾಡಿದರು.
ಮಗನನ್ನು ಕಳೆದುಕೊಂಡ ದುಃಖದಲ್ಲಿ ಪೋಷಕರಿದ್ದಾರೆ. ಅವರಿಗೆ ಧೈರ್ಯ ತುಂಬುವ ಕೆಲಸವನ್ನು ಮುಖಂಡರು ಮಾಡಬೇಕು. ಸರ್ಕಾರದಿಂದ ಬರಬೇಕಾದ ಪರಿಹಾರಧನ ದೊರಕಿಸಿಕೊಡಲು ಅಧಿಕಾರಿಗಳು ತ್ವರಿತ ಕ್ರಮ ಜರುಗಿಸಬೇಕು. ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಹಿಡಿಯಲು ಮುಂದಾಗಿದ್ದು, ಸೆರೆ ಸಿಗುವವರೆಗೂ ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದರು.
ಗ್ರಾಪಂ ಸದಸ್ಯ ಪ್ರಭುಸ್ವಾಮಿ, ನಂಜುಂಡೇಗೌಡ, ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಸಂಚಾಲಕ ಕಳ್ಳೀಪುರ ಮಹದೇವಸ್ವಾಮಿ, ಚಂದ್ರಪ್ಪ, ಕೆಬ್ಬೇಹುಂಡಿ ಶಿವಕುಮಾರ್, ಹಲಸಹಳ್ಳಿ ಮಹದೇವಸ್ವಾಮಿ, ವೀರಶೈವ ಮಹಾಸಭಾದ ಕಾರ್ಯದರ್ಶಿ ಪರಶಿವಮೂರ್ತಿ, ಬೋರೇಗೌಡ ಇತರರು ಇದ್ದರು.