ಕಲಬುರಗಿ: ರಾಜ್ಯದಲ್ಲಿ ೧೫ ತಿಂಗಳಲ್ಲಿ ಸುಮಾರು ೧೨೦೦ ರೈತರು, ಕೂಲಿಕಾರರು, ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದು, ಆಘಾತಕಾರಿ ವಿಷಯವಾಗಿದ್ದು, ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೇ ಹೊಣೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಯು.ಬಸವರಾಜ ಆರೋಪಿಸಿದರು.
ಸರ್ಕಾರಗಳ ಕೃಷಿ ವಿರೋಧಿ ನೀತಿಗಳು, ಕೃಷಿ ಭೂಮಿ ಕಾರ್ಪೋರೇಟ್ ಕಂಪನಿಗಳಿಗೆ ನೀಡುವ ಹುನ್ನಾರದ ಭಾಗವಾಗಿವೆ. ಆತ್ಮಹತ್ಯೆ ಮಾಡಿಕೊಂಡವರ ಕುಟುಂಬಕ್ಕೆ ೨೫ ಲಕ್ಷ ರೂ. ಪರಿಹಾರ ನೀಡಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಆತ್ಮಹತ್ಯೆ ಬಗ್ಗೆ ಧ್ವನಿ ಎತ್ತದೆ ರೈತರ ರಕ್ಷಣೆಗೆ ಧಾವಿಸುತ್ತಿಲ್ಲ. ರಾಜ್ಯದ ಎಲ್ಲ ಸಂಸದರು, ಶಾಸಕರ ನಡೆ ಹೊಣೆಗೇಡಿತನದಾಗಿದೆ. ಕೆಲವು ಕಾರ್ಪೋರೇಟ್ ಕಂಪನಿಗಳ ಸುಮಾರು ೩೫ ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡುವ ಒಕ್ಕೂಟ ಸರ್ಕಾರ ರೈತರ ಸಾಲವನ್ನು ಮನ್ನಾ ಮಾಡಬೇಕು. ರೈತರು, ಕೂಲಿಕಾರರು, ಗೇಣಿದಾರರು, ಕೃಷಿ ಕೂಲಿಕಾರ್ಮಿಕರು ಹಾಗೂ ಸ್ತಿçà ಶಕ್ತಿ, ಮೈಕ್ರೋ ಫೈನಾನ್ಸ್ಗಳಲ್ಲಿ ಸಾಲ ಪಡೆದ ಮಹಿಳೆಯರನ್ನು ಸರ್ಕಾರ ರಕ್ಷಿಸಬೇಕು ಎಂದು ಆಗ್ರಹಿಸಿದರು.
ಕೇರಳ ಸರ್ಕಾರದ ಮಾದರಿಯ ಋಣ ಮುಕ್ತ ಕಾಯ್ದೆ ಜಾರಿಗೆ ತರಬೇಕು, ರೈತರ ಬೆಳೆಗೆ ಡಾ.ಎಂ.ಎಸ್.ಸ್ವಾಮಿನಾಥನ್ ಆಯೋಗದ ಸಲಹೆಯಂತೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾಯ್ದೆ ಜಾರಿ ಮಾಡಬೇಕು, ಉದ್ಯೋಗ ಖಾತ್ರಿ ದಿನಗೂಲಿಯನ್ನು ೭೫೦ ರೂ.ಗೆ ಹೆಚ್ಚಿಸಬೇಕು, ಕೆಲಸವನ್ನು ೨೦೦ ದಿನ ಹೆಚ್ಚಿಸಿ, ನಗರಕ್ಕೂ ವಿಸ್ತರಿಸಬೇಕು ಎಂದು ಆಗ್ರಹಿಸಿದರು.
ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಡಾ.ಸಾಯಿಬಣ್ಣ ಗುಡುಬಾ ಇತರರಿದ್ದರು.