ಜಿಲ್ಲೆ

ಮೃತ ಯುವಕನ ಅಂಗಾಂಗ ದಾನ

ಹಲಗೂರು: ಅಪಘಾತದಲ್ಲಿ ಮೃತಪಟ್ಟ ಯುವಕನ ಅಂಗಾಂಗ ದಾನ ಮಾಡುವ ಮೂಲಕ ಕುಟುಂಬದವರು ಮಾನವೀಯತೆ ಮೆರೆದಿದ್ದಾರೆ.


ಸಮೀಪದ ಕೊನ್ನಾಪುರ ಗ್ರಾಮದ ಅಭಿಷೇಕ್ (28) ಅವರು ಆ.17ರಂದು ರಾತ್ರಿ ಪುರದೊಡ್ಡಿ ಗ್ರಾಮಕ್ಕೆ ಹೋಗಿ ವಾಪಸ್ ಸ್ವಗ್ರಾಮಕ್ಕೆ ಬರವಾಗ ಟಿ.ಕೆ.ಹಳ್ಳಿಯ ಬಳಿ ಬೈಕ್ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದರು. ತಕ್ಷಣವೇ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಿದುಳು ನಿಷ್ಕ್ರಿಯಗೊಂಡಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಮೃತಪಟ್ಟರು.


ಹೀಗಾಗಿ ಮೃತನ ತಾಯಿ ಸರಸ್ವತಿ ಹಾಗೂ ಕುಟುಂಬಸ್ಥರು ಅಭಿಷೇಕ್‌ನ ಅಂಗಾಂಗಗಳನ್ನು ಆಸ್ಪತ್ರೆಗೆ ದಾನ ಮಾಡಿದ್ದಾರೆ. ಅಂತ್ಯಕ್ರಿಯೆ ಸ್ವಗ್ರಾಮ ಕೊನ್ನಾಪುರ ಗ್ರಾಮದಲ್ಲಿ ನಡೆಯಿತು.