ಜಿಲ್ಲೆ

ಮೃತ ಬಾಲಕನ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ ವಿತರಣೆ

ಎಚ್.ಡಿ.ಕೋಟೆ: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮೇಟಿಕುಪ್ಪೆ ಅರಣ್ಯ ವ್ಯಾಪ್ತಿಯ ಕಲ್ಲಹಟ್ಟಿ ಬೀಟ್ ನಲ್ಲಿ ಸೋಮವಾರ ಹುಲಿ ದಾಳಿಗೆ ಒಳಗಾಗಿ ಮೃತಪಟ್ಟ ಬಾಲಕನ ಕುಟುಂಬಕ್ಕೆ ಅರಣ್ಯ ಇಲಾಖೆ ವತಿಯಿಂದ 15 ಲಕ್ಷ ರೂ. ಪರಿಹಾರದ ಚೆಕ್ ವಿತರಣೆ ಮಾಡಲಾಯಿತು.


ಶಾಸಕ ಅನಿಲ್ ಚಿಕ್ಕಮಾದು ನೇತೃತ್ವದಲ್ಲಿ ಹುಲಿ ದಾಳಿ ನಡೆಸಿದ್ದ ಸ್ಥಳದಲ್ಲಿ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಸುದೀರ್ಘ ಚರ್ಚೆ ಮಾಡಲಾಯಿತು.
ಗ್ರಾಮಸ್ಥರು ಮಾತನಾಡಿ, ಮೃತ ಬಾಲಕನ ಕುಟುಂಬಕ್ಕೆ ಸರ್ಕಾರದ ಪರಿಹಾರದ ಜತೆಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನದ ಅಡಿಯಲ್ಲಿಯೂ ಪರಿಹಾರ ನೀಡಬೇಕು. ನೊಂದ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ನೀಡಬೇಕು. ಆರ್‌ಎಫ್‌ಒ ಹರ್ಷಿತ್ ಕಚೇರಿಯಲ್ಲಿ ಕುಳಿತು ಕಾಲಹರಣ ಮಾಡುತ್ತಿದ್ದಾರೆಯೇ ಹೊರತು ಕಾಡಂಚಿನ ರೈತರ ಸಮಸ್ಯೆ ಪರಿಹರಿಸುತ್ತಿಲ್ಲ. ಕಚೇರಿಗೆ ರೈತರು ಹೋದರೆ ಸರಿಯಾಗಿ ಸ್ಪಂದಿಸದೆ ಉಡಾಫೆಯಿಂದ ವರ್ತಿಸುತ್ತಾರೆ. ಹಾಗಾಗಿ ಅವರನ್ನು ಸೇವೆಯಿಂದ ಅಮಾನತು ಮಾಡದ ಹೊರತು ಮೃತದೇಹವನ್ನು ಎತ್ತಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.


ಸರ್ಕಾರದ ಪರಿಹಾರದ ಜತೆಗೆ ಮೇಟಿಕುಪ್ಪೆ ಅರಣ್ಯ ವಲಯ ಅಧಿಕಾರಿ ಹರ್ಷಿತ್ ಅವರು ವೈಯಕ್ತಿಕವಾಗಿ 5 ಲಕ್ಷ ರೂ., ಪರಿಹಾರ ನೀಡಲು ಒಪ್ಪಿದ ನಂತರ ಮೃತ ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲು ಮೃತ ಕುಟುಂಬಸ್ಥರು ಒಪ್ಪಿದರು.


ಅರಣ್ಯ ಇಲಾಖೆಯಿಂದ ಐದು ವರ್ಷಗಳ ಕಾಲ ಮೃತ ಕುಟುಂಬಕ್ಕೆ ತಿಂಗಳಿಗೆ 4000 ರೂ. ಮಾಸಾಶನ ನೀಡುವುದು, ಕುಟುಂಬದ ಒಬ್ಬರಿಗೆ ನೌಕರಿ ನೀಡುವುದು ಹಾಗೂ ಸರ್ಕಾರದಿಂದ ಒಂದು ಮನೆ ಹಾಗೂ ತಾಂಡ ಅಭಿವೃದ್ಧಿ ನಿಗಮದಿಂದ 3.5 ಲಕ್ಷ ರೂ. ಸೌಲಭ್ಯ ನೀಡಲು ತೀರ್ಮಾನ ತೆಗೆದುಕೊಳ್ಳಲಾಯಿತು.


ಸ್ಥಳದಲ್ಲಿ ಮೃತ ಬಾಲಕನ ತಂದೆ ಕೃಷ್ಣನಾಯಕ ಅವರಿಗೆ ಶಾಸಕ ಅನಿಲ್ ಚಿಕ್ಕಮಾದು ಅರಣ್ಯ ಇಲಾಖೆಯಿಂದ ನೀಡಿದ 15 ರೂ. ಚೆಕ್ ವಿತರಣೆ ಮಾಡಿದರು. ಉಳಿದ 5 ಲಕ್ಷ ರೂ. ಗಳನ್ನು ಮಂಗಳವಾರ ವಿತರಣೆ ಮಾಡುವುದಾಗಿ ತಿಳಿಸಿದರು.
ಅರಣ್ಯ ಇಲಾಖೆಯ ಅಧಿಕಾರಿಗಳು ಜನರಿಗೆ ರಕ್ಷಣೆ ನೀಡುವುದರ ಜತೆಗೆ ಅವರಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಮೇಟಿಕುಪ್ಪೆ ವಲಯ ಅರಣ್ಯ ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ಹಾಗಾಗಿ ಅವರ ಮೇಲಧಿಕಾರಿಗಳು ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಕಾಡು ಪ್ರಾಣಿಗಳು ರೈತರ ಜಮೀನಿಗೆ ಬರದಂತೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕು ಎಂದು ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.


ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ ಮಾತನಾಡಿ, ಕುಟುಂಬದ ಒಬ್ಬರಿಗೆ ಇಲಾಖೆಯಲ್ಲಿ ಅರೆಕಾಲಿಕ ಹುದ್ದೆ ನೀಡಲಾಗುವುದು. ಅಧಿಕಾರಿ ಮೇಲೆ ಶಿಸ್ತು ಕ್ರಮ ಜರುಗಿಸಲು ವರದಿ ಸಲ್ಲಿಸಲಾಗುತ್ತದೆ. ಬಾಲಕನನ್ನು ಬಲಿ ತೆಗೆದುಕೊಂಡ ಹುಲಿ ಸೆರೆಗೆ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ತಿಳಿಸಿದರು.

ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲು ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆ ಶವಗಾರಕ್ಕೆ ಸಾಗಿಸಲಾಯಿತು. ಘಟನೆಗೆ ಸಂಬಂಧಿಸಿದಂತೆ ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಸಿಎಫ್ ರಂಗಸ್ವಾಮಿ, ಆರ್‌ಎಫ್‌ಒಗಳಾದ ಹರ್ಷಿತ್, ಪೂಜಾ, ಮಧು, ಸಿದ್ದರಾಜು, ಎಎಸ್‌ಪಿ ನಂದಿನಿ, ಡಿವೈಎಸ್‌ಪಿ ಮಹೇಶ್, ಇನ್ಸ್‌ಪೆಕ್ಟರ್‌ಗಳಾದ ಶಬ್ಬಿರ್ ಹುಸೇನ್, ಲಕ್ಷ್ಮೀಕಾಂತ್, ಎಸ್‌ಐ ರವಿಶಂಕರ್, ಪ್ರಕಾಶ್ ಇದ್ದರು.

ಅರಣ್ಯಾಧಿಕಾರಿಗಳಿಗೆ ಶಾಸಕ ತರಾಟೆ: ಶಾಸಕ ಅನಿಲ್ ಚಿಕ್ಕಮಾದು ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ, ಹದಿನೈದು ದಿನಗಳಿಂದ ಹುಲಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಸಾರ್ವಜನಿಕರು ನಿಮ್ಮ ಗಮನಕ್ಕೆ ತಂದಿದ್ದರೂ ನೀವು ಯಾಕೇ ಕ್ರಮವಹಿಸಿಲ್ಲ. ಹುಲಿ ಚಲನವಲನ ಬಗ್ಗೆ ನೀವು ಯಾಕೆ ಗಮನಿಸಿಲ್ಲ. ನಿಮ್ಮ ಬೇಜವಾಬ್ದಾರಿಯಿಂದ ಒಂದು ಮಗುವಿನ ಬಲಿಯಾಗಿದೆ ಎಂದು ಅರಣ್ಯಾಧಿಕಾರಿ ವಿರುದ್ಧ ಹರಿಹಾಯ್ದರು.