ಅಥಣಿಯಲ್ಲಿ ಇತ್ತೀಚೆಗೆ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದ ವಿಪ ಸದಸ್ಯ ಲಕ್ಷ್ಮಣ ಸವದಿ. ಸುರೇಶ ಮುಂಜೆ, ರವೀಂದ್ರ ನಾಯ್ಕೋಡಿ, ಲಕ್ಷ್ಮಣ ಬನಜವಾಡ, ಡಾ.ಮಹೇಶ ಕಾಪಸೆ, ಡಾ.ಅವಿನಾಶ ನಾಯಿಕ, ಡಾ.ಆನಂದ ಕುಲಕರ್ಣಿ ಇತರರಿದ್ದರು. 
ಜಿಲ್ಲೆ

ಮೃತ ಚಾಲಕನ ಕುಟುಂಬಕ್ಕೆ 2 ಲಕ್ಷ ರೂ.

ಅಥಣಿ: ಬಣಜವಾಡ ಕಾಲೇಜಿನ ಶಾಲಾ ವಾಹನ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳ ವೈದ್ಯಕೀಯ ವೆಚ್ಚ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಭರಿಸಲಾಗುವುದು ಹಾಗೂ ಅಪಘಾತದಲ್ಲಿ ಮರಣ ಹೊಂದಿದ ಚಾಲಕನ ಮಕ್ಕಳ ವಿದ್ಯಾಭ್ಯಾಸಕ್ಕೆ ವೈಯಕ್ತಿಕವಾಗಿ 2 ಲಕ್ಷ ರೂ. ನೀಡಲಾಗುವುದು ಎಂದು ವಿಪ ಸದಸ್ಯ ಲಕ್ಷ್ಮಣ ಸವದಿ ಹೇಳಿದರು.

ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳ ಸೋಮವಾರ ಆರೋಗ್ಯ ವಿಚಾರಿಸಿ, ಮೃತ ಚಾಲಕ ರಘುನಾಥ ಅವತಾಡೆ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ತುಂಬಿ ಅವರು ಮಾತನಾಡಿದರು.

ಮೃತ ಚಾಲಕ ತನ್ನ ಜೀವದ ಹಂಗು ತೊರೆದು ಧೈರ್ಯದಿಂದ ವಿದ್ಯಾರ್ಥಿಗಳ ಪ್ರಾಣ ಉಳಿಸಿದ ಮಹಾನ್ ವ್ಯಕ್ತಿ. ಇತ್ತೀಚೆಗೆ ಭೂ ಸೇನೆಯಿಂದ ನಿವೃತ್ತಿ ಹೊಂದಿದ್ದ ಮೃತ ರಘುನಾಥನಿಗೆ ಇಬ್ಬರು ಚಿಕ್ಕ ಮಕ್ಕಳಿದ್ದಾರೆ. ಮಕ್ಕಳ ಶಿಕ್ಷಣಕ್ಕಾಗಿ 2 ಲಕ್ಷ ರೂ. ಮೃತ ಚಾಲಕನ ಪತ್ನಿ ಹಾಗೂ ಮಕ್ಕಳ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಠೇವಣಿ ಇಡುವುದಾಗಿ ತಿಳಿಸಿದರು.

ತಹಸೀಲ್ದಾರ್ ಸುರೇಶ ಮುಂಜೆ, ಸಿಪಿಐ ರವೀಂದ್ರ ನಾಯ್ಕೋಡಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪ್ರವೀಣ ಪಾಟೀಲ, ಲಕ್ಷ್ಮಣ ಬಣಜವಾಡ, ಅನಿತಾ ಬಣಜವಾಡ, ಅಮರ ದುರ್ಗಣ್ಣವರ, ಶ್ರೀಶೈಲ ನಾಯಿಕ, ಪುರಸಭಾ ಸದಸ್ಯ ಸಂತೋಷ ಸಾವಡಕರ, ರಾಜು ಗುಡೋಡಗಿ ಇತರರಿದ್ದರು.

ಹಣ್ಣು-ಹಂಪಲ ವಿತರಣೆ

ಗಚ್ಚಿನಮಠದ ಶಿವಬಸವ ಗುರುಮುರುಘರಾಜೇಂದ್ರ ಸ್ವಾಮೀಜಿ ಸೋಮವಾರ ಆಸ್ಪತ್ರೆಗೆ ತೆರಳಿ ಅಪಘಾತದಲ್ಲಿ ಗಾಯಗೊಂಡಿರುವ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿ ಅವರಿಗೆ ಹಣ್ಣು-ಹಂಪಲ ವಿತರಿಸಿದರು. ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಲ್ಲಿ ಧೈರ್ಯ ತುಂಬಿದರು.