ಜಿಲ್ಲೆ

ಮೂವರು ಸೈಬರ್ ವಂಚಕರ ಬಂಧನ

Chitradurga - Desk - Pranav Kumar

ಚಿತ್ರದುರ್ಗ: ಹಣ ಹೂಡಿಕೆಯಿಂದ ಅಧಿಕ ಲಾಭ ಪಡೆಯಬಹುದು ಎಂದು ನಂಬಿಸಿ 34 ಲಕ್ಷ ರೂ. ವಂಚಿಸಿದ್ದ ಮೂವರು ಸೈಬರ್ ಆರೋಪಿಗಳನ್ನು ಚಿತ್ರದುರ್ಗ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.

ವಂಚಿಸಿದ ಹಣದಿಂದಲೇ ಖರೀದಿಸಿದ್ದ 4.5 ಲಕ್ಷ ರೂ. ಮೌಲ್ಯದ ಕಾರು, 3 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ತನಿಖೆ ಮುಂದುವರಿದಿದ್ದು, ಮತ್ತಷ್ಟು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಫೆ. 14ರಂದು ಉಡುಪಿ ಜಿಲ್ಲೆ ಕಾರ್ಕಳದ ಪ್ರಥ್ವೇಶ್‌ಪೈನನ್ನು, 15ರಂದು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಮೂಲದ ಕೆ.ಎನ್.ನಂದೀಶನನ್ನು ಕಾರ್ಕಳದಲ್ಲಿ, 17ರಂದು ಬೆಂಗಳೂರಿನ ಉಮರ್ ಫಾರೂಕ್‌ನನ್ನು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ವಾಟ್ಸ್‌ಆ್ಯಪ್ ಮೂಲಕ 2024ರ ಅ. 1ರಿಂದ ನ. 14ರ ವರೆಗೆ ಗೋಲ್ಡ್ ಸ್ಟಾಕ್ ಇನ್ವೆಸ್ಟರ್ ಡಿಸ್‌ಕಷನ್ ಗ್ರೂಪ್ ಹೆಸರಿನಲ್ಲಿ ಶೇರು ಮಾರುಕಟ್ಟೆ ಫ್ಲಾಟ್ ಫಾರಂ ಇದ್ದು, ಹಣ ಹೂಡಿಕೆ ಮಾಡುವಂತೆ ನಂಬಿಸಿ ತಮ್ಮ ಬ್ಯಾಂಕ್ ಖಾತೆಗಳಿಗೆ 34 ಲಕ್ಷ ರೂ. ವರ್ಗಾವಣೆ ಮಾಡಿಸಿಕೊಂಡಿದ್ದು, ಯಾವುದೇ ರೀತಿಯ ಹಣ ಹಿಂದಿರುಗಿಸದೆ, ಮೋಸ ಮಾಡಿರುವುದಾಗಿ ಚಿತ್ರದುರ್ಗದ ವಾಸಿ ಸೈಯದ್ ಸಿರಾಜ್ ನವೆಂಬರ್ 23ರಂದು ಠಾಣೆಗೆ ದೂರು ಸಲ್ಲಿಸಿದ್ದರು.

ಇಲ್ಲಿನ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಎಸ್‌ಐ ಎನ್.ವೆಂಕಟೇಶ್, ಎಎಸ್‌ಐ ಅಂಜನಪ್ಪ, ಸಿಬ್ಬಂದಿಗಳಾದ ಕೆಂಚಪ್ಪ, ಗಂಗಾಧರಪ್ಪ, ಗಗನ್‌ದೀಪ್ ತಂಡ ಹಣದ ಹರಿವಿನ ಜಾಡು ಹಿಡಿದು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಪ್ರಕರಣ ಭೇಧಿಸಿದ ತಂಡಕ್ಕೂ, ತಾಂತ್ರಿಕ ವಿಶ್ಲೇಷಣೆ ನಡೆಸಿದ ಸಿಬ್ಬಂದಿ ಆಶಾ, ಹರ್ಷವರ್ಧನ್, ಲೋಕೇಶ್ ಅವರ ಕಾರ್ಯವೈಖರಿಗೆ ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.