ಜಿಲ್ಲೆ

ಮೂವರು ವಿದ್ಯಾರ್ಥಿಗಳು ನೀರು ಪಾಲು

ಮೈಸೂರು: ಕೆಆರ್‌ಎಸ್ ಹಿನ್ನೀರಿನಲ್ಲಿ ಮುಳುಗಿ ಮೈಸೂರಿನ ಮೂವರು ವಿದ್ಯಾರ್ಥಿಗಳು ಶನಿವಾರ ಸಂಜೆ ಮೃತಪಟ್ಟಿದ್ದು, ಇಬ್ಬರು ಪಾರಾಗಿದ್ದಾರೆ.


ಪಡುವಾರಹಳ್ಳಿಯ ಭರತ್(20), ರಾಮಕೃಷ್ಣ ನಗರದ ಪ್ರವೀಣ್ (20), ಹೆಬ್ಬಾಳಿನ ಸೂರ್ಯಬೇಕರಿಯ ವರುಣ್(21) ಮೃತರು. ಮನೋಜ್ ಮತ್ತು ವ್ನಿೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.


ಇವರೆಲ್ಲ ಮೈಸೂರಿನ ಜಯಲಕ್ಷ್ಮೀಪುರಂನಲ್ಲಿರುವ ಸಂತ ಜೋಸೆಫ್ ಕಾಲೇಜಿನಲ್ಲಿ ಬಿಸಿಎ ಸ್ನಾತಕ ಪದವಿಯ 2ನೇ ವರ್ಷದಲ್ಲಿ ಓದುತ್ತಿರುವ ಸಹಪಾಠಿಗಳು.
ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ಕಾಲೇಜಿನ ಸ್ನೇಹಿತರು ಮೂರು ಬೈಕ್‌ಗಳಲ್ಲಿ ಮೀನಾಕ್ಷಿಪುರ ಬಳಿ ಕೆಆರ್‌ಎಸ್ ಹಿನ್ನೀರಿಗೆ ತೆರಳಿದ್ದರು. ನೀರಿನಲ್ಲಿ ಆಟವಾಡುವ ಸಂದರ್ಭದಲ್ಲಿ ಈ ಮೂವರು ಮಧ್ಯಭಾಗಕ್ಕೆ ಹೋಗಿ ಸಿಲುಕಿಕೊಂಡಿದ್ದಾರೆ. ಅಲ್ಲಿಂದ ಹೊರಬರಲಾಗದೆ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ವಿಷಯ ತಿಳಿದು ಸ್ಥಳಕ್ಕೆ ಬಂದ ಮೈಸೂರು ತಾಲೂಕಿನ ಇಲವಾಲ ಠಾಣೆ ಪೊಲೀಸರು ಪರಿಶೀಲನೆ ನಡೆಸಿದರು. ಅಗ್ನಿಶಾಮಕ ದಳ ಸಿಬ್ಬಂದಿ ಹಿನ್ನೀರಿನಲ್ಲಿ ಮೃತದೇಹಕ್ಕಾಗಿ ಶೋಧ ಕಾರ್ಯಚರಣೆ ನಡೆಸಿದ್ದಾರೆ.


ಭರತ್ ಮೃತದೇಹ ಪತ್ತೆಯಾಗಿದ್ದು, ಇನ್ನೂ ಇಬ್ಬರ ಮೃತದೇಹಕ್ಕಾಗಿ ಹುಟುಕಾಟ ನಡೆದಿದೆ. ರಾತ್ರಿ ಹೊತ್ತಿನಲ್ಲಿ ಕಾರ್ಯಾಚರಣೆ ನಡೆಸುವುದು ಅಗ್ನಿಶಾಮಕ ಸಿಬ್ಬಂದಿಗೆ ಕಷ್ಟಕರ. ಈ ನಡುವೆಯೂ ಶೋಧ ಮುಂದುವರಿದಿದೆ. ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.