ಜಿಲ್ಲೆ

ಮೂವರು ಪುರಸಭೆ ಸದಸ್ಯರ ಸ್ಥಾನಕ್ಕೆ ಕುತ್ತು, ಚುನಾವಣಾ ವೆಚ್ಚದ ಮಾಹಿತಿ ನೀಡದ್ದಕ್ಕೆ 12 ಮಂದಿ ವಿರುದ್ಧ ಆಯೋಗದ ಶಿಸ್ತು ಕ್ರಮ

ಆನೇಕಲ್: ಚುನಾವಣಾ ಆಯೋಗಕ್ಕೆ ಸ್ಥಳೀಯ ಸಂಸ್ಥೆಗಳ ಚುನಾವಣಾ ವೆಚ್ಚದ ಮಾಹಿತಿಯನ್ನು ಸಲ್ಲಿಸದ ಹಿನ್ನೆಲೆಯಲ್ಲಿ ಆನೇಕಲ್ ಪುರಸಭೆಯಿಂದ ಚುನಾವಣೆಗೆ ಸ್ಪರ್ಧಿಸಿದ್ದ 12 ಮಂದಿಯನ್ನು ಅನರ್ಹಗೊಳಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದ್ದು, ಅದರ ಪ್ರಕಾರ 3 ವರ್ಷ ಯಾವುದೇ ಚುನಾವಣೆಗೆ ಸ್ಪರ್ಧೆ ಮಾಡುವಂತಿಲ್ಲ. ಆದರೆ ಈ ಆದೇಶ ಮೂವರು ಪುರಸಭೆ ಸದಸ್ಯರ ಸ್ಥಾನಕ್ಕೂ ಕುತ್ತು ತಂದಿದೆ.

12 ಮಂದಿ 2019ರ ಪುರಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಈ ಪೈಕಿ ವಾರ್ಡ್ 14ರ ಸದಸ್ಯೆ ಹೇಮಲತಾ ಸುರೇಶ್, ವಾರ್ಡ್ 16ರ ಸದಸ್ಯ ಶ್ರೀನಿವಾಸ್, ವಾರ್ಡ್ 17ರ ಸದಸ್ಯೆ ಲಲಿತಾ ಜಯಗಳಿಸಿದ್ದರು.

ನಿಯಮದಂತೆ ಮತ ಎಣಿಕೆ ನಡೆದು ಫಲಿತಾಂಶ ಘೋಷಣೆಯಾದ 30 ದಿನಗಳಲ್ಲಿ ಚುನಾವಣಾ ಆಯೋಗಕ್ಕೆ ಚುನಾವಣೆಯ ವೆಚ್ಚದ ಬಗ್ಗೆ ಮಾಹಿತಿ ನೀಡಬೇಕಿತ್ತು. ಆದರೆ ಈ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ದೂರಲಾಗಿದೆ. ಈ ಬಗ್ಗೆ ನೋಟಿಸ್ ನೀಡಿದರೂ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಆನೇಕಲ್ ಪುರಸಭೆಗೆ ಸ್ಪರ್ಧಿಸಿದ್ದ 12 ಮಂದಿ ವಿರುದ್ಧ ಚುನಾವಣಾ ಆಯೋಗ ಕ್ರಮ ಜರುಗಿಸಿದ್ದು, ಮೂವರು ಸದಸ್ಯರ ಸದಸ್ಯತ್ವವನ್ನು ವಜಾಗೊಳಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಚುನಾವಣಾ ಆಯೋಗದಿಂದ ಕೆಲ ತಿಂಗಳ ಹಿಂದೆ ನೋಟಿಸ್ ಬಂದಿತ್ತು. ಅದಕ್ಕೆ ಉತ್ತರವನ್ನು ಸಹ ಆನೇಕಲ್ ತಹಸೀಲ್ದಾರ್ ಅವರ ಮುಖಾಂತರವಾಗಿ ಚುನಾವಣಾ ಆಯೋಗದ ಖರ್ಚು ವೆಚ್ಚದ ಬಗ್ಗೆ ನೀಡಲಾಗಿದೆ. ಆದರೆ ತಹಸೀಲ್ದಾರ್ ಅವರ ಕಚೇರಿಯಿಂದ ಕಳುಹಿಸಲಾಗಿದೆಯೇ, ಇಲ್ಲವೇ ಎನ್ನುವ ಮಾಹಿತಿ ಇಲ್ಲ. ನಾವು ದಾಖಲೆಗಳನ್ನು ಸಲ್ಲಿಸಿರುವ ಬಗ್ಗೆ ತಹಸೀಲ್ದಾರ್ ಅವರು ಕೊಟ್ಟಿರುವ ಪ್ರತಿ ನಮ್ಮ ಬಳಿ ಇದೆ. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಚುನಾವಣಾ ಆಯೋಗಕ್ಕೆ ಮನವರಿಕೆ ಮಾಡಿಕೊಡಲಾಗುವುದು. ಎನ್.ಎಸ್.ಪದ್ಮನಾಭ ಆನೇಕಲ್ ಪುರಸಭಾ ಅಧ್ಯಕ್ಷ 2019ರ ಪುರಸಭೆ ಚುನಾವಣೆಯಲ್ಲಿ 17ನೇ ವಾರ್ಡ್‌ನಿಂದ ಸ್ಪರ್ಧಿಸಿ ಸದಸ್ಯನಾಗಿ ಆಯ್ಕೆಯಾಗಿದ್ದು, ಚುನಾವಣಾ ಆಯೋಗಕ್ಕೆ ಖರ್ಚು ವೆಚ್ಚದ ಬಗ್ಗೆ ಮಾಹಿತಿ ಸಲ್ಲಿಸಿದ್ದೇವೆ. ಬಳಿಕ ಕೆಲ ತಿಂಗಳ ಹಿಂದೆ ನೋಟಿಸ್ ಕಳುಹಿಸಿದ್ದರು. ಆಗಲು ಸಹ ವೆಚ್ಚದ ಮಾಹಿತಿ ಸಲ್ಲಿಸಿದ್ದೇವೆ. ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿರುವ ಬಗ್ಗೆ ನಮ್ಮ ಬಳಿ ದಾಖಲೆಗಳಿದ್ದು, ಈ ಬಗ್ಗೆ ಪುನಃ ಮನವಿ ಮಾಡಿಕೊಳ್ಳಲಾಗುವುದು. ಸ್ಪಂದನೆ ದೊರೆಯದಿದ್ದಲ್ಲಿ ಕಾನೂನು ಹೊರಟ ನಡೆಸಲಾಗುವುದು. ಶ್ರೀನಿವಾಸ್ ಪುರಸಭೆ ಸದಸ್ಯ ಚುನಾವಣಾ ಆಯೋಗಕ್ಕೆ ಸರಿಯಾದ ಮಾಹಿತಿ ನೀಡಿಲ್ಲ ಎಂದು 12 ಮಂದಿಯನ್ನು ಅನರ್ಹಗೊಳಿಸಿದ್ದು, ಇದರಲ್ಲಿ ಮೂವರು ಸದಸ್ಯರಾಗಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಿಂದ ಬಂದ ಆದೇಶದ ಮೇರೆಗೆ ಪುರಸಭಾ ಮುಖ್ಯಾಧಿಕಾರಿ ಮುಖೇನ ಈ ಆದೇಶವನ್ನು ಜಾರಿ ಮಾಡಲಾಗಿದೆ. ದಿನೇಶ್ ತಹಸೀಲ್ದಾರ್