ಜಿಲ್ಲೆ

ಮೂವರು ನಕಲಿ ಪತ್ರಕರ್ತರ ಬಂಧನ

ನಿಪ್ಪಾಣಿ: ತಾಲೂಕಿನ ಕುರ್ಲಿ ಗ್ರಾಮದ ಮನೆಯೊಂದಕ್ಕೆ ಅಕ್ರಮವಾಗಿ ಮನೆ ನುಗ್ಗಿ ಸ್ಟಿಂಗ್​ ಆಪರೇಶನ್​ ಮಾಡುವುದಾಗಿ ಬೆದರಿಕೆ ಒಡ್ಡಿ ಹಣಕ್ಕೆ ಬೇಡಿಕೆಯಿಟ್ಟ ಆರೋಪದಡಿ ಮೂವರು ನಕಲಿ ಪತ್ರಕರ್ತರನ್ನು ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದಾರೆ.

ಗೋಕಾಕ ತಾಲೂಕಿನ ಟಪ್ರಭಾದ ಅಮರ ಜಾಲೆಂದ್ರ ಕೊಡತೆ (34), ವಿವೇಕಾನಂದ ಪ್ರಭುದೇವ ಕುದರಿಮಠ ಮತ್ತು ಹುಕ್ಕೇರಿ ತಾಲೂಕಿನ ಬಡಕುಂದ್ರಿಯ ಗಂಗಾಧರ ಸಿದ್ದಪ್ಪ ಶಿರಗಾವೆ ಬಂಧಿತರು.

ಸ್ಥಳಿಯ ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಕುರ್ಲಿ ಗ್ರಾಮದ ಆಹಾರ ಧಾನ್ಯಗಳ ವ್ಯಾಪಾರಿ ತಾನಾಜಿ ತುಕಾರಾಮ ಪಾಟೀಲ ಅವರ ಪತ್ನಿ ಹಾಗೂ ಮಗಳು ಮಾತ್ರ ಮನೆಯಲ್ಲಿದ್ದಾಗ ಆರೋಪಿಗಳು ಅಕ್ರಮವಾಗಿ ನುಗ್ಗಿ "ಪಡಿತರ ಅಕ್ಕಿ ಸಂಗ್ರಹ ಮಾಡಿಟ್ಟುಕೊಂಡ ಕುರಿತು ಮಾಹಿತಿ ಬಂದಿದೆ. ನಾವು ಸಾಮಾಜಿಕ ಜಾಲತಾಣ ಪ್ರತಿನಿಧಿಗಳಿದ್ದೇವೆ' ಎನ್ನುತ್ತ ವಿಡಿಯೋ ಮಾಡಲಾರಂಭಿಸಿದ್ದಾರೆ.

"ನಿಮ್ಮ ಮನೆಯಲ್ಲಿ ಅಕ್ರಮವಾಗಿ ಅಕ್ಕಿ ಬಚ್ಚಿಡಲಾಗಿದೆ, ನಾವು ಸ್ಟಿಂಗ್​ ಆಪರೇಶನ್​ ಮಾಡುತ್ತಿದ್ದೇವೆ. ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಲಾಗುವುದು' ಎಂದು ಬೆದರಿಕೆಯೊಡ್ಡಿದ್ದಾರೆ. ಪ್ರಕರಣ ಮುಚ್ಚಿ ಹಾಕಲು ಹಣದ ಬೇಡಿಕೆ ಇಟ್ಟಿದ್ದಾಗಿ ಪೊಲೀಸರು ತಿಳಿಸಿದ್ದಾರೆ.