ಜಿಲ್ಲೆ

ಮೂವರು ನಕಲಿ ತೆರಿಗೆ ಅಧಿಕಾರಿಗಳ ಬಂಧನ

ಸಾಗರ: ಆದಾಯ ತೆರಿಗೆ ಅಧಿಕಾರಿಗಳ ಸೋಗಿನಲ್ಲಿ ತಾಲೂಕಿನ ಜನ್ನೆಹಕ್ಲು ವಿಶ್ವನಾಥ್ ಎಂಬುವರಿಂದ 2.30 ಲಕ್ಷ ರೂ. ದೋಚಿದ್ದ ಮೂವರು ಆರೋಪಿಗಳನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ 1.50 ಲಕ್ಷ ರೂ. ನಗದು, ಟೊಯೊಟಾ ಇಟಿಯೋಸ್ ಕಾರು ವಶಕ್ಕೆ ಪಡೆದಿದ್ದಾರೆ. 8 ಜನರ ತಂಡದಲ್ಲಿ ಪ್ರಮುಖ ಸೂತ್ರದಾರ ಬ್ರಾಹ್ಮಣಕುಗ್ವೆ ಜಗದೀಶ್ ಸೇರಿದಂತೆ ಇತರ ಐವರು ಆರೋಪಿಗಳ ಪತ್ತೆ ಕಾರ್ಯ ನಡೆದಿದೆ.

ವಿಶ್ವನಾಥ್ ಆಂಡ್ರಾಯ್್ಡ ಡೆವಲಪರ್ ಆಗಿ ಕೆಲಸ ಮಾಡುತ್ತಿದ್ದು, ಅವರ ತೋಟ, ಮನೆ, ವಾಹನ ಮತ್ತು ವ್ಯವಹಾರಗಳ ಬಗ್ಗೆ ಮಾಹಿತಿ ಇರುವ ಬ್ರಾಹ್ಮಣಕುಗ್ವೆಯ ಜಗದೀಶ್ ಈ ಸಂಚಿನ ಪ್ರಮುಖ ಸೂತ್ರದಾರ ಎನ್ನಲಾಗಿದೆ.

ವಿಶ್ವನಾಥ್ ಮನೆಗೆ ಜೂ. 12ರಂದು ಆಗಮಿಸಿದ್ದ ನಾಲ್ವರು ಅಪರಿಚಿತರು ಆದಾಯ ತೆರಿಗೆ ಅಧಿಕಾರಿಗಳೆಂದು ನಂಬಿಸಿ 2.30 ಲಕ್ಷ ರೂ. ದೋಚಿ ಪರಾರಿಯಾಗಿದ್ದರು. ದಾಳಿ ನಾಟಕದ ವೇಳೆ ವಿಶ್ವನಾಥ್ ಹಾಗೂ ಆತನ ಸಹೋದರ ವಿನಯಕುಮಾರ್ ಅವರನ್ನು ಸಿದ್ದಾಪುರಕ್ಕೆ ಕರೆದೊಯ್ದು ಎಸ್​ಬಿಐನಲ್ಲಿ 50 ಸಾವಿರ ರೂ., ವಿನಯಕುಮಾರ್ ಖಾತೆಯಿಂದ ಆನ್​ಲೈನ್​ನಲ್ಲಿ 1.40 ಲಕ್ಷ ರೂ., ಎಟಿಎಂನಿಂದ 40 ಸಾವಿರ ರೂ. ಸೇರಿದಂತೆ ಒಟ್ಟು 2.30 ಲಕ್ಷ ರೂ. ವಸೂಲು ಮಾಡಿದ್ದರು. ನಂತರ ವಿಶ್ವನಾಥ್ ಮತ್ತು ವಿನಯಕುಮಾರ್ ಅವರನ್ನು ಜನ್ನೆಹಕ್ಲು ನಿವಾಸಕ್ಕೆ ಕರೆದುಕೊಂಡು ಬಂದು ಸಹಿ ಮಾಡಿದ ಎರಡು ಖಾಲಿ ಚೆಕ್ ಪಡೆದು, ತನಿಖೆಗೆ ಕರೆದಾಗ ಬರಬೇಕು ಎಂದು ತಾಕೀತು ಮಾಡಿ ಪರಾರಿಯಾಗಿದ್ದರು.

ಘಟನೆ ಬಗ್ಗೆ ವಿಶ್ವನಾಥ್ ಅವರು ವಕೀಲರ ಬಳಿ ಚರ್ಚೆ ನಡೆಸಿದಾಗ ಮನೆಗೆ ಬಂದಿದ್ದು ನಕಲಿ ಆದಾಯ ತೆರಿಗೆ ಅಕಾರಿಗಳು ಎನ್ನುವುದು ಗೊತ್ತಾಗಿ ಜೂ. 15ರಂದು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಡಿಎಸ್ಪಿ ವಿನಾಯಕ ಎಸ್. ಶೆಟ್ಟಿಗಾರ್, ಸಿಪಿಐ ಸುನೀಲಕುಮಾರ್ ನೇತೃತ್ವದಲ್ಲಿ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು.

ಕಾರು ನೀಡಿದ ಸುಳಿವು: ವಂಚಕರು ವಿಶ್ವನಾಥ್ ಅವರನ್ನು ಬ್ಯಾಂಕ್ ಮತ್ತು ಎಟಿಎಂಗಳಿಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಸಿಸಿ ಕ್ಯಾಮರಾಗಳಲ್ಲಿ ಲಭ್ಯವಾದ ದೃಶ್ಯಗಳು ಮತ್ತು ಕಾರಿನ ನಂಬರ್ ಆಧರಿಸಿ ಆರೋಪಿಗಳನ್ನು ಪತ್ತೆ ಮಾಡಲಾಗಿದೆ. ಬಂಧಿತ ಆರೋಪಿಗಳೆಲ್ಲರೂ ಇದೇ ಮೊದಲ ಬಾರಿಗೆ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದಾರೆ.

ಸೂತ್ರದಾರ: ಸಾಗರ ತಾಲ್ಲೂಕು ಬ್ರಾಹ್ಮಣಕುಗ್ವೆ ಜಗದೀಶ್ ಈ ಪ್ರಕರಣದ ಪ್ರಮುಖ ಸೂತ್ರಧಾರನಾಗಿದ್ದು, ಈತ ವಿಶ್ವನಾಥ್ ಅವರಿಗೆ ಸಂಬಂಧಿಸಿದ ಎಲ್ಲ ಮಾಹಿತಿ ತಿಳಿದುಕೊಂಡಿದ್ದ. ಜಗದೀಶ ಕೆಲ ವರ್ಷಗಳಿಂದ ಭದ್ರಾವತಿಯಲ್ಲಿ ಚಾಲಕನಾಗಿ ಕಾರ್ಯ ನಿರ್ವಹಿಸಿದ್ದು ಈಚೆಗೆ ಆತನನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು. ಆಗ ಇವನಿಗೆ ಪರಿಚಯವಾದ ಚಂದನ್​ರಾವ್, ನವೀನ್​ಕುಮಾರ್, ಲತೇಶ್ ಎಂಬುವರಿಗೆ ಜನ್ನಹಕ್ಲು ವಿಶ್ವನಾಥ್ ಅವರ ಬಗ್ಗೆ ಮಾಹಿತಿ ನೀಡುತ್ತಾನೆ.

ಆರೋಪಿಗಳಲ್ಲಿ ಒಬ್ಬನಾಗಿರುವ ಚಂದನ್​ನ ಸಹೋದರ ಬೆಂಗಳೂರಿನ ಚರಣ ಹಾಗೂ ಅವನ ಇಬ್ಬರು ಸಹಚರರ ಸಹಾಯ ಪಡೆದು ಭದ್ರಾವತಿಯ ಪರಿಚಯಸ್ಥರೊಬ್ಬರಿಂದ ಬಾಡಿಗೆಗೆ ಕಾರು ಪಡೆದು ದಾಳಿ ನಾಟಕ ಮಾಡಿದ್ದಾರೆ.

ಪಿಎಸ್​ಐ ಭರತ್ ಕುಮಾರ್, ಸಿಬ್ಬಂದಿಗಳಾದ ಶೇಖ್ ಫೈರೋಜ್, ಅಶೋಕ್, ರವಿಬಾಬು, ಸಂದೀಪ್, ಪ್ರಕಾಶ್ ಅಂಬಳಿ, ಚಾಲಕ ಗಿರೀಶ್ ಬಾಬು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.