ಜಿಲ್ಲೆ

ಮೂವರು ಜಾನುವಾರು ಕಳ್ಳರ ಬಂಧನ

ಮೂಡಿಗೆರೆ: ಮೂವರು ಜಾನುವಾರು ಕಳ್ಳರನ್ನು ಬಣಕಲ್ ಹಾಗೂ ಕಾರ್ಕಳ ಪೊಲೀಸರು ಬಂಧಿಸಿ, ಆರೋಪಿಗಳಿಂದ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಕಾರ್ಕಳದ ಯೂನುಸ್ (32), ಮೂಡಬಿದ್ರೆ ನಾಸೀರ್ (30) ಮತ್ತು ಇಕ್ಬಾಲ್ (32) ಬಂಧಿತ ಆರೋಪಿಗಳು. ಪ್ರಕರಣ ಸಂಬಂಧ ಕಾರ್ಕಳ ಪೊಲೀಸರು ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಬಣಕಲ್ ಸುತ್ತಮುತ್ತ ಜಾನುವಾರು ಕಳ್ಳತನ ಮಾಡಿರುವುದಾಗಿ ಮಾಹಿತಿ ನೀಡಿದ್ದಾರೆ. ಕೆಲ ದಿನದ ಹಿಂದೆ ಚಕ್ಕಮಕ್ಕಿ ಮತ್ತು ಬಣಕಲ್ ಗ್ರಾಮದ ಮತ್ತಿಕಟ್ಟೆ ರಸ್ತೆಗಳಲ್ಲಿ ಜಾನುವಾರುಗಳ ಕಳ್ಳತನ ನಡೆದಿತ್ತು. ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು. ಅಷ್ಟರಲ್ಲಿ ಆರೋಪಿಗಳನ್ನು ಕಾರ್ಕಳ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದರು.

ಆರೋಪಿಗಳು ಉಡುಪಿ, ಮಂಗಳೂರು, ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಜಾನುವಾರು ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಬಣಕಲ್ ಪಿಎಸ್‌ಐ ರೇಣುಕಾ ಮತ್ತು ಸಿಬ್ಬಂದಿ ಕಾರ್ಕಳದಿಂದ ಆರೋಪಿಗಳನ್ನು ಕರೆತಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.