ಕಾರವಾರ/ದಾಂಡೇಲಿ/ಹಳಿಯಾಳ: ಕೋವಿಡ್-19ನಿಂದ ಗುಣವಾದ ಮೂವರು ಮಹಿಳೆಯರನ್ನು ಗುರುವಾರ ಕ್ರಿಮ್್ಸ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಆದರೆ, ಮತ್ತೆ ಮೂವರಿಗೆ ಸೋಂಕು ಕಂಡುಬಂದಿದೆ.
ಸಿದ್ದಾಪುರದ 20 ಹಾಗೂ 18 ವರ್ಷದ ಇಬ್ಬರು ಯುವತಿಯರು, ಕಾರವಾರದ 41 ವರ್ಷದ ಮಹಿಳೆಯನ್ನು ಗುರುವಾರ ಕರೊನಾ ವಾರ್ಡ್ನಿಂದ ಬಿಡುಗಡೆ ಮಾಡಲಾಯಿತು. ಕ್ರಿಮ್್ಸ ನಿರ್ದೇಶಕ ಡಾ. ಗಜಾನನ ನಾಯಕ, ಜಿಲ್ಲಾ ಸರ್ಜನ್ ಡಾ. ಶಿವಾನಂದ ಕುಡ್ತಲಕರ್ ಹಾಗೂ ಸಿಬ್ಬಂದಿ ಈ ಸಂದರ್ಭದಲ್ಲಿ ಹಾಜರಿದ್ದು, ಗುಣವಾದವರಿಗೆ ಪ್ರಮಾಣಪತ್ರ ನೀಡಿದರು.
ಮೂವರಿಗೆ ಸೋಂಕು: ಮಹಾರಾಷ್ಟ್ರದಿಂದ ಜೂನ್ 7ರಂದು ಆಗಮಿಸಿ ದಾಂಡೇಲಿಯಲ್ಲಿ ಸಾಂಸ್ಥಿಕ ಕ್ವಾರಂಟೈನ್ನಲ್ಲಿರುವ 34 ಹಾಗೂ 24 ವರ್ಷದ ಇಬ್ಬರು ಪುರುಷರಿಗೆ ರೋಗ ಖಚಿತವಾಗಿದೆ. ಅವರನ್ನು ಕರೆತಂದ ಚಾಲಕ ಹಾಗೂ ಭೇಟಿಯಾದ ಮನೆಯವರನ್ನು ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೆ, ಅವರ ಕುಟುಂಬದವರು ನಡೆಸುತ್ತಿದ್ದ ಅಂಗಡಿಯೊಂದನ್ನು ತಾತ್ಕಾಲಿಕವಾಗಿ ಮುಚ್ಚಿಸಲಾಗಿದೆ.
ಮನೆಗೆ ತೆರಳಿದ್ದವಳಿಗೆ ರೋಗ ಖಚಿತ: 7 ದಿನದ ಸಾಂಸ್ಥಿಕ ಕ್ವಾರಂಟೈನ್ ಮುಗಿಸಿ ಮನೆಗೆ ತೆರಳಿದ್ದ ಹಳಿಯಾಳದ 21 ವರ್ಷದ ಮಹಿಳೆಯಲ್ಲಿ ಕರೊನಾ ಇರುವುದು ಖಚಿತವಾಗಿದೆ. ಮಹಾರಾಷ್ಟ್ರದ ದಾದರ್ನಲ್ಲಿ ಸಂಬಂಧಿಕರ ಮನೆಗೆ ತೆರಳಿದ್ದರು. ಜೂನ್ 2 ರಂದು ನಗರಕ್ಕೆ ಆಗಮಿಸಿದ್ದ ಮಹಿಳೆಯನ್ನು ಸಾಂಸ್ಥಿಕ ಕ್ವಾರಂಟೈನ್ನಲ್ಲಿರಿಸಿ ಜೂನ್ 9 ರಂದು ಗಂಟಲ ದ್ರವದ ಮಾದರಿಯನ್ನು ಸಂಗ್ರಹಿಸಿ ಮನೆಗೆ ಕಳಿಸಲಾಗಿತ್ತು. 11 ರಂದು ಅವರಿಗೆ ರೋಗ ಇರುವುದು ಖಚಿತವಾಗಿದೆ. ಇದರಿಂದ ಆಕೆಯ ಮನೆಯಲ್ಲಿರುವ 9 ಜನರನ್ನು ತಾಲೂಕು ಸರ್ಕಾರಿ ಆಸ್ಪತ್ರೆಯ ಐಸೋಲೇಶನ್ನಲ್ಲಿ ಇರಿಸಲಾಗಿದೆ. ಹಳಿಯಾಳದ ಸಿದ್ಧರಾಮೇಶ್ವರ ಗಲ್ಲಿಯನ್ನು ಸೀಲ್ ಡೌನ್ ಮಾಡಲಾಗಿದೆ.
ಹೋಟೆಲ್ ಉದ್ಯಮದವರು ಜಾಗರೂಕರಾಗಿರಿ: ಗೋಕರ್ಣ: ಹೋಟೆಲ್, ರೆಸಾರ್ಟ್ ಉದ್ಯಮದಲ್ಲಿರುವವರು ಜಾಗರೂಕರಾಗಿರಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಆತಂಕ ತಪ್ಪಿದ್ದಲ್ಲ ಎಂದು ಭಟ್ಕಳ ಎಎಸ್ಪಿ ಬಿ. ನಿಖಿಲ್ ಹೇಳಿದರು. ಪೊಲೀಸ್ ಇಲಾಖೆ ವತಿಯಿಂದ ಇಲ್ಲಿ ಉಪಾಹಾರ, ವಸತಿ ಉದ್ಯಮಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇಲಾಖೆ ವತಿಯಿಂದ ಆರು ಸೂತ್ರಗಳನ್ನು ಈ ಉದ್ಯಮದವರಿಗೆ ರಚಿಸಲಾಗಿದ್ದು ಇದನ್ನು ಎಲ್ಲರಿಗೆ ಒದಗಿಸಲಾಗುವುದು. ಇದನ್ನು ಎಲ್ಲರೂ ತಪ್ಪದೆ ಪಾಲಿಸಿದರೆ ಕರೊನಾ ಆತಂಕದಿಂದ ದೂರವಾಗಬಹುದು ಎಂದರು.
ಸಿ ಫಾರಂ ಕಡ್ಡಾಯ: ವಿದೇಶಿಯರನ್ನು ಉಳಿಸಿಕೊಳ್ಳುವ ಹಲವರು ಪೊಲೀಸರಿಗೆ ‘ಸಿ’ಫಾರಂ ಸಲ್ಲಿಸದೇ ಇರುವುದು ಬೆಳಕಿಗೆ ಬಂದಿದೆ. ಇದರಿಂದ ಅಂತವರು ಅನೇಕ ಕಾನೂನಾತ್ಮಕ ಸಮಸ್ಯೆ ಎದುರಿಸುವ ಸಾಧ್ಯತೆಯಿದೆ. ಅಂತವರ ವಿರುದ್ಧ ಇಲಾಖೆ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಲಿದೆ ಎಂದರು. ತಹಸೀಲ್ದಾರ ಮೇಘರಾಜ ನಾಯ್ಕ, ಆರೋಗ್ಯಾಧಿಕಾರಿ ಡಾ. ಜಗದೀಶ ನಾಯ್ಕ ಮಾತನಾಡಿದರು. ಪಿಡಿಒ ವಿನಯಕುಮಾರ, ಪಿಎಸ್ಐ ನವೀನ ನಾಯ್ಕ, ಸಿಪಿಐ ಪರಮೇಶ್ವರ ಇದ್ದರು.</