ಕೊಳ್ಳೇಗಾಲ: ತಾಲೂಕಿನ ವಿವಿಧೆಡೆ ಕಳ್ಳತನ ಮಾಡಿದ್ದ ಅಪ್ರಾಪ್ತ ಬಾಲಕ ಸೇರಿದಂತೆ ಮೂವರನ್ನು ಕೊಳ್ಳೇಗಾಲ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಪಟ್ಟಣದ ಆನಂದ ಜ್ಯೋತಿ ಕಾಲನಿ ನಿವಾಸಿ ಲಂಬು ದರ್ಶನ್(21), ನರೀಪುರ ಗ್ರಾಮದ ದರ್ಶನ್ (20) ಹಾಗೂ ಪಟ್ಟಣ ಬಡಾವಣೆಯೊಂದರ 17ವರ್ಷದ ಬಾಲಕ ಆರೋಪಿಯಾಗಿದ್ದಾನೆ. ತಾಲೂಕಿನ ತೇರಂಬಳ್ಳಿ ಗ್ರಾಮದಲ್ಲಿ ಇದೇ ತಿಂಗಳು ಬೈಕ್ ಕಳ್ಳತನ ಮಾಡಿ ಅದೇ ಬೈಕ್‌ನಲ್ಲಿ ತೆರಳಿ ಅರೇಪಾಳ್ಯ ಗ್ರಾಮದಲ್ಲಿ ರಂಗಸ್ವಾಮಿ ಎನ್ನುವರ ಮನೆಯಲ್ಲಿ ನಗದು ಹಾಗೂ ಚಿನ್ನಾಭರಣ ಕಳ್ಳತನ ಮಾಡಿದ್ದರು.
ಇದಲ್ಲದೆ ಆಗಸ್ಟ್‌ನಲ್ಲಿ ಪಟ್ಟಣದ ಮಾಜಿ ಸಚಿವ ಎನ್.ಮಹೇಶ್ ಮನೆಯಲ್ಲಿ 50 ಸಾವಿರ ರೂ.ಗಳನ್ನು ಕಳ್ಳತನ ಮಾಡಿದ್ದರು. ಬಂಧಿತರಿಂದ ಬೈಕ್ ಹಾಗೂ 40 ಗ್ರಾಂ. ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಲಂಬು ದರ್ಶನ್ ಹಾಗೂ ದರ್ಶನ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಪ್ರಾಪ್ತ ಆರೋಪಿಗೆ ನೋಟಿಸ್ ನೀಡಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.