ತಿಪಟೂರು: ಅಂತರ ಜಿಲ್ಲಾ ದರೋಡೆಕೋರರನ್ನು ಬಂಧಿಸಿರುವ ನಗರಠಾಣೆ ಪೊಲೀಸರು, ಚಿನ್ನಾಭರಣ, ಕಾರು ಮತ್ತು ಬೈಕ್ ಸೇರಿ ಸುಮಾರು 5.40 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಜನವರಿ 28ರಂದು ಬೈಕಿನಲ್ಲಿ ಬಂದ ಇಬ್ಬರು ನಗರದ ಅನಸೂಯರಾಜ್ ಎಂಬ ಮಹಿಳೆಯ ಕೊರಳಲ್ಲಿದ್ದ ಸುಮಾರು 80 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಪ್ರಕರಣದ ಆರೋಪಿಗಳನ್ನು ಫೆ.7ರಂದು ಕಡೂರಿನಲ್ಲಿ ತಿಪಟೂರು ನಗರಠಾಣೆ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಮಗಳೂರಿನ ಇರ್ಫಾನ್ (35), ಅಸ್ಫಾನ್ (23) ಮತ್ತು ಬೇಲೂರು ತಾಲೂಕಿನ ಮುದಿಗೆರೆಯ ಅಖಿಬ್ ಶರೀಫ್ (24) ಬಂಧಿತರು. ತಿಪಟೂರಿನಲ್ಲಿ ಕದ್ದ ಬೈಕ್ನೊಂದಿಗೆ ಜ.28ರಂದು ಚಿನ್ನ ಸರ ಕದ್ದ ಆರೋಪಿಗಳು, ನಂತರ ಕಡೂರು ರೈಲ್ವೆ ನಿಲ್ದಾಣದ ಬಳಿ ಕಾರನ್ನು ಕದ್ದು, ಹಿರಿಯೂರಿನ ಜುವೆಲ್ಲರಿ ಒಂದರಲ್ಲಿ ಚಿನ್ನಾಭರಣ ದರೋಡೆ ಮಾಡಲು ಸಂಚು ರೂಪಿಸಿದ್ದರು. ಅದಕ್ಕೆ ಅಗತ್ಯವಿದ್ದ ಒಂದು ಗ್ಯಾಸ್ ಸಿಲೆಂಡರ್, ಗ್ಯಾಸ್ ಕಟ್ಟರ್, ಹರಿತವಾದ ಕಬ್ಬಿಣದ ಹಾರೆಯೊಂದಿಗೆ ಸಜ್ಜಾಗಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಜಿಲ್ಲಾ ಎಎಸ್ಪಿ ಮರಿಯಪ್ಪ ಹಾಗೂ ಬಿ.ಎಸ್.ಅಬ್ದುಲ್ ಖಾದರ್ ನೇತೃತ್ವದಲ್ಲಿ ತಿಪಟೂರು ಡಿವೈಎಸ್ಪಿ ವಿನಾಯಕ್ ಎನ್.ಶಟಗೇರಿ ಸೂಚನೆ ಮೇರೆಗೆ ನಗರಠಾಣೆಯ ಇನ್ಸ್ಪೆಕ್ಟರ್ ಸಿ.ವೆಂಕಟೇಶ್, ಪಿಎಸ್ಐ ಡಿ.ಕೃಷ್ಣಪ್ಪ, ಎಎಸ್ಐಗಳಾದ ಚಿಕ್ಕಲಕ್ಕೇಗೌಡ, ಉಸ್ಮಾನ್ಸಾಬ್ ಮತ್ತು ಸಿಬ್ಬಂದಿ ಮೋಹನ್ಕುಮಾರ್, ಮೋಹನ್, ಲೋಕೇಶ್, ಯತೀಶ್, ಸಾಗರ್, ಅಂಬಿಗೇರ್, ಮಂಜುನಾಥ್ ಕುಪ್ಪಾಡ, ಮನೋಜ್ ಕಾರ್ಯಾಚರಣೆಯಲ್ಲಿ ಇದ್ದರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣ
ದಾಖಲಾದ 10 ದಿನಗಳಲ್ಲಿ ಆರೋಪಿಗಳನ್ನು ಬಂಧಿಸಿದ ಸಿಬ್ಬಂದಿಯನ್ನು ಎಸ್ಪಿ ಕೆ.ವಿ. ಅಶೋಕ್ ಅಭಿನಂದಿಸಿದ್ದಾರೆ.