ಜಿಲ್ಲೆ

ಮೂವತ್ತೇಳು ಮಂಗಗಳ ಪುಣ್ಯತಿಥಿ

ಬೇಲೂರು: ಕಳೆದ ವರ್ಷ 37 ಮಂಗಗಳ ಮಾರಣ ಹೋಮ ನಡೆಸಿ ತಾಲೂಕಿನ ಚೌಡನಹಳ್ಳಿ ಗ್ರಾಮದ ಬಳಿ ತಂದು ಹಾಕಿದ್ದ ಮಂಗಗಳ ಶವಗಳ ಅಂತ್ಯ ಸಂಸ್ಕಾರರವನ್ನು ಹಿಂದುಪರ ಸಂಘಟನೆಗಳ ಮುಖಂಡರು ನಡೆಸಿದ್ದರು. ಭಾನುವಾರ ಮಂಗಗಳ ಸಮಾದಿಗೆ ವಿಶೇಷ ಪೂಜೆ ಸಲ್ಲಿಸಿ ವಾರ್ಷಿಕ ಪುಣ್ಯತಿಥಿ ಆಚರಿಸಿ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.

ಕಳೆದ ವರ್ಷ ಜುಲೈ 29 ರಂದು ಮಂಗಗಳನ್ನು ಹಾಸನ ಸಮೀಪದ ಗ್ರಾಮವೊಂದರಲ್ಲಿ ಕೊಂದು ತಾಲೂಕಿನ ಚೌಡನಹಳ್ಳಿ ಬಳಿ ತಂದು ಹಾಕಲಾಗಿತ್ತು. ಅವುಗಳನ್ನು ತಗರೆ ರಕ್ಷಿತ ಅರಣ್ಯ ಪ್ರದೇಶದಲ್ಲಿ ಹಿಂದುಪರ ಸಂಘಟನೆಗಳ ಮುಖಂಡರು ಮುಂದೆ ನಿಂತು ಅಂತ್ಯ ಸಂಸ್ಕಾರ ಮಾಡಿದ್ದರು. ಅದರ ಸ್ಮರಣಾರ್ಥ ಭಾನುವಾರ ಭಜರಂಗದಳ, ಕೇಸರಿ ಯುವ ಪಡೆ, ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಮಂಗಗಳ ಸಮಾಧಿಗೆ ವಿಶೇಷ ಹೂವಿನ ಅಲಂಕಾರದೊಂದಿಗೆ ಪೂಜೆ ಸಲ್ಲಿಸಿ ಹನುಮಾನ್ ಚಾಲೀಸಾ ಪಠಿಸಿದರು.

ಭಜರಂಗದಳ ಪ್ರಾಂತ್ಯ ಸಹ ಸಂಚಾಲಕ ರಘು ಮಾತನಾಡಿ, ಹಿಂದುಗಳ ಆರಾಧ್ಯ ದೈವ ಆಂಜನೇಯನ ಪ್ರತಿರೂಪದ ಮಂಗಗಳ ಶವಗಳಿಗೆ ಹಿಂದು ಧರ್ಮದ ಪ್ರಕಾರ ಅಂತ್ಯ ಸಂಸ್ಕಾರವನ್ನು ಕಳೆದ ವರ್ಷ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಭಾನುವಾರ ವರ್ಷದ ಪುಣ್ಯತಿಥಿ ನೆರವೇರಿಸಿದ್ದೇವೆ ಎಂದು ತಿಳಿಸಿದರು.

ಶಾಸಕ ಕೆ.ಎಸ್. ಲಿಂಗೇಶ್‌ರವರು ಈ ಮಂಗಗಳ ಅಂತ್ಯ ಸಂಸ್ಕಾರ ಮಾಡಿರುವ ಸ್ಥಳದಲ್ಲಿ ಉದ್ಯಾನವನ ಸೇರಿದಂತೆ ಸ್ಮಾರಕ ನಿರ್ಮಿಸಲು ಭೂಮಿಪೂಜೆ ಮಾಡಿದ್ದರು. ಆದರೆ ಈವರೆಗೂ ಯಾವುದೇ ಕೆಲಸ ಮಾಡಿಸಿಲ್ಲ. ಆದ್ದರಿಂದ ಈ ಸ್ಥಳವನ್ನು ವಿಶೇಷ ಪೂಜಾ ಧಾರ್ಮಿಕ ಸ್ಥಳವನ್ನಾಗಿ ಮಾಡಲು ನಾವುಗಳು ಮುಂದಾಗುತ್ತೇವೆ ಎಂದರು.

ರಾಷ್ಟ್ರಧರ್ಮ ಸಂಘಟನೆ ಅಧ್ಯಕ್ಷ ಸಂತೋಷ್ ಕೆಂಚಾಂಬ, ವಿಶ್ವ ಹಿಂದೂ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಕೃಷ್ಣೇಗೌಡ, ಕೇಸರಿ ಯುವಪಡೆ ಅಧ್ಯಕ್ಷ ಅದೇಶ್, ವೀರಾಂಜನೇಯ ಸ್ವಾಮಿ ದೇಗುಲದ ಅಧ್ಯಕ್ಷ ಮೋಹನ್, ಭಜರಂಗ ದಳದ ಮುಖಂಡ ಮಂಜುನಾಥ್, ಕೌಶಿಕ್, ಗ್ರಾ.ಪಂ. ಸದಸ್ಯ ತೇಜಕುಮಾರ್ ಇತರರಿದ್ದರು.