ಹನೂರು: ಪಟ್ಟಣದ ಜನತೆಗೆ ಕುಡಿಯುವ ನೀರು, ವಿದ್ಯುತ್ ದೀಪ, ಇತರ ಮೂಲ ಸೌಕರ್ಯ ಒದಗಿಸುವುದರ ಜತೆಗೆ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ತ್ವರಿತವಾಗಿ ಸ್ಪಂದಿಸಬೇಕು ಎಂದು ಪಟ್ಟಣ ಪಂಚಾಯಿತಿ ಸದಸ್ಯರು ಒತ್ತಾಯಿಸಿದರು.
ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಶನಿವಾರ ಅಧ್ಯಕ್ಷೆ ಚಂದ್ರಮ್ಮ ಅಧ್ಯಕ್ಷತೆಯಲ್ಲಿ ಸರ್ವ ಸದಸ್ಯರ ಸಭೆ ನಡೆಯಿತು. ಕುಡಿಯುವ ನೀರಿನ ವ್ಯತ್ಯಯದಿಂದಾಗಿ ಜನರು ತೊಂದರೆಪಡುವಂತಾಗಿದೆ. ಬೀದಿ ದೀಪದ ನಿರ್ವಹಣೆ ಸಮರ್ಪಕವಾಗಿಲ್ಲ. ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಈ ಬಗ್ಗೆ ಅಗತ್ಯ ಕ್ರಮವಹಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.
ಪಪಂ ಮುಖ್ಯಾಧಿಕಾರಿ ಪರಶಿವಯ್ಯ ಪ್ರತಿಕ್ರಿಯಿಸಿ, ಸಿದ್ದಯ್ಯನಪುರ ಪಂಪ್‌ಹೌಸ್‌ನಲ್ಲಿ ಪ್ರವಾಹದ ವೇಳೆ ನೀರು ಆವರಿಸಿ 150 ಎಚ್‌ಪಿ ಸಾಮರ್ಥ್ಯದ ಮೋಟಾರ್ ದುರಸ್ತಿಗೊಂಡಿತ್ತು. ಇದೀಗ ದುರಸ್ತಿಪಡಿಸಿದ್ದು, ಸದ್ಯದಲ್ಲಿಯೇ ಅಳವಡಿಸಲಾಗುವುದು. ಮುಖ್ಯ ರಸ್ತೆಯಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸುವುದು ಸೇರಿದಂತೆ ಜನರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಎಂದು ತಿಳಿಸಿದರು.
2019-22 ಸಾಲಿನಲ್ಲಿ 14 ಮತ್ತು 15ನೇ ಹಣಕಾಸು ಯೋಜನೆ ಸೇರಿದಂತೆ ಇನ್ನಿತರ ಯೋಜನೆಯಡಿ ಅನುದಾನ ದುರ್ಬಳಕೆಯಾಗಿದೆ. ಅಲ್ಲದೇ, ನಗರೋತ್ಥಾನ ಅನುದಾನದಲ್ಲಿ ಅಧ್ಯಕ್ಷರ ನಕಲಿ ಸಹಿ ಬಳಸಿ ಹಣ ಹಾಗೂ ಅಧಿಕಾರ ದುರುಪಯೋಗವಾಗಿದೆ. ಇದಕ್ಕೆ ಸಮರ್ಪಕ ಉತ್ತರ ನೀಡಬೇಕು. ಜತೆಗೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಜೆಡಿಎಸ್ ಬೆಂಬಲಿತ ಸದಸ್ಯರಾದ ಮಹೇಶ್, ಆನಂದ್, ಮಹೇಶ್‌ನಾಯ್ಕ, ಪವಿತ್ರಾ, ರೂಪಾ, ಮಂಜುಳಾ ಹಾಗೂ ಮಾಮ್ತಾಜ್ ಬಾನು ಒತ್ತಾಯಿಸಿದರು. ಇದಕ್ಕೆ ಸೂಕ್ತ ಉತ್ತರ ಬಾರದಿದ್ದರಿಂದ ಆಕ್ರೋಶಗೊಂಡ ಸದಸ್ಯರು ಸಭಾಂಗಣದಲ್ಲಿಯೇ ಧರಣಿ ಕುಳಿತರು.