ಬೆಂಗಳೂರಿನ ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಸಮಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಭೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಧ್ಯಕ್ಷತೆಯಲ್ಲಿ ನಡೆಯಿತು. ಸಿ.ಪುಟ್ಟರಂಗಶೆಟ್ಟಿ, ಎನ್.ಮಹೇಶ್, ಆರ್.ನರೇಂದ್ರ, ಸಿ.ಎಸ್.ನಿರಂಜನ್ ಕುಮಾರ್, ಚಾರುಲತಾ ಸೋಮಲ್, ಎಸ್.ಕಾತ್ಯಾಯಿನಿದೇವಿ ಮತ್ತು ಇತರರು ಇದ್ದರು. 
ಜಿಲ್ಲೆ

ಮೂಲಸೌಕರ್ಯಗಳಿಗೆ ಪ್ರಾಮುಖ್ಯ ನೀಡಿ

ಚಾಮರಾಜನಗರ: ಹನೂರು ತಾಲೂಕಿನ ಮಹದೇಶ್ವರ ಬೆಟ್ಟದಲ್ಲಿ ನಡೆಯಲಿರುವ ಮಹಾಲಯ ಅಮಾವಾಸ್ಯೆ, ದಸರಾ, ದೀಪಾವಳಿ ಜಾತ್ರಾ ಮಹೋತ್ಸವಗಳಿಗೆ ಕೈಗೊಂಡಿರುವ ಸಿದ್ಧತೆ ಕುರಿತು ಸಚಿವ ವಿ.ಸೋಮಣ್ಣ ಅಧಿಕಾರಿಗಳು ಹಾಗೂ ಶಾಸಕರೊಂದಿಗೆ ಸಭೆ ನಡೆಸಿದರು.

ಬೆಂಗಳೂರಿನ ವಿಧಾನಸೌಧದ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಬೆಟ್ಟಕ್ಕೆ ಸಂಪರ್ಕಿಸುವ ರಸ್ತೆಗಳ ಅಭಿವೃದ್ಧಿ ಹಾಗೂ ಬೆಟ್ಟದ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಸಂಬಂಧ ಚರ್ಚೆ ನಡೆಸಿ, ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಾತ್ರೆಗೆ ಬರುವ ಭಕ್ತರಿಗೆ ಕುಡಿಯುವ ನೀರು, ದಾಸೋಹ, ಶೌಚ, ಸ್ನಾನದ ಗೃಹಗಳ ವ್ಯವಸ್ಥೆ ಸಮರ್ಪಕವಾಗಿ ಆಗಬೇಕು. ಮೂಲ ಸೌಕರ್ಯಗಳಿಗೆ ಯಾವುದೇ ಕೊರತೆಯಾಗಬಾರದು ಎಂದು ಸಚಿವರು ತಿಳಿಸಿದರು.

ಬೆಟ್ಟದಲ್ಲಿಯೂ ಜಾತ್ರಾ ಸಂದರ್ಭದಲ್ಲಿ ಆಕರ್ಷಕವಾಗಿ ವಿದ್ಯುತ್ ದೀಪಾಲಂಕಾರ ಮಾಡಬೇಕು. ಸ್ವಚ್ಛತಾ ಕಾರ್ಯಗಳು ಆಗಿಂದಾಗ್ಗೆ ನಡೆಯಬೇಕು. ಬಸ್‌ಗಳ ವ್ಯವಸ್ಥೆ, ಸುಗಮ ಸಂಚಾರ ಅಗತ್ಯ ವ್ಯವಸ್ಥೆಗಳಿಗೆ ಎಲ್ಲ ಸಮರ್ಪಕ ನಿರ್ವಹಣೆಯಾಗಬೇಕು ಎಂದು ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕೊಳ್ಳೇಗಾಲದಿಂದ ಮಲೆಮಹದೇಶ್ವರ ಬೆಟ್ಟಕ್ಕೆ ಸಂಪರ್ಕಿಸುವ ರಸ್ತೆ ಕಾರ್ಯ ಸಮರ್ಪಕವಾಗಿ ಆಗಬೇಕು. ಭಕ್ತಾದಿಗಳ ವಾಹನಗಳ ಸುಗಮ ಸಂಚಾರಕ್ಕೆ ರಸ್ತೆಗಳಿಂದ ಯಾವುದೇ ಅಡಚಣೆಯಾಗದಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು.

ಮಲೆಮಹದೇಶ್ವರ ಬೆಟ್ಟದ ವ್ಯಾಪ್ತಿಯ ಕಾಡಂಚಿನ ಗ್ರಾಮಗಳು, ಇತರೆ ಭಾಗಗಳಿಗೆ ವಿದ್ಯುತ್ ಸಂಪರ್ಕ ನೀಡುವ ಕಾಮಗಾರಿಗೆ ಇರುವ ತೊಡಕುಗಳನ್ನು ಪರಿಹರಿಸಬೇಕು. ವಿಳಂಬ ಮಾಡದೇ ವಿದ್ಯುತ್ ಸಂಬಂಧ ಕಾಮಗಾರಿಗಳು ಬೇಗನೆ ಪೂರ್ಣಗೊಳಿಸಬೇಕೆಂದು ಸಚಿವರು ಸೂಚಿಸಿದರು.

ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಆರ್.ನರೇಂದ್ರ, ಎನ್.ಮಹೇಶ್, ಸಿ.ಎಸ್.ನಿರಂಜನ್‌ಕುಮಾರ್, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿ.ಪಂ ಸಿಇಒ ಕೆ.ಎಂ.ಗಾಯಿತ್ರಿ, ಮುಖ್ಯ ಅರಣ್ಯ ಸಂರಕ್ಷಾಣಾಧಿಕಾರಿ ಉಪೇಂದ್ರಸಿಂಗ್, ಮಲೆಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಎಸ್.ಕಾತ್ಯಾಯಿನಿದೇವಿ ಇತರರು ಇದ್ದರು.