ಹಾಸನ: ಇಲ್ಲಿನ ಮೂಲಭೂತ ಸೌಕರ್ಯವನ್ನು ಹಂತ ಹಂತವಾಗಿ ಅಭಿವೃದ್ಧಿ ಮಾಡಲಾಗುವುದು ಎಂದು ಶಾಸಕ ಎಚ್.ಪಿ. ಸ್ವರೂಪ್ ಸ್ವರೂಪ್ ಭರವಸೆ ನೀಡಿದರು.
ನಗರದ ರೈಲ್ವೆ ನಿಲ್ದಾಣದ ಹಿಂಭಾಗ ಇರುವ ಖಾಲಿ ಪ್ರದೇಶದಲ್ಲಿ ಇಲ್ಲಿನ ಕನಕ ಕ್ಷೇಮಾಭಿವೃದ್ಧಿ ಸಂಘ ಹಾಗೂ ಅರಣ್ಯ ಇಲಾಖೆ ಹಾಗೂ ನಾಗರಿಕರು ಬುಧವಾರ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಲ್ಲಿ ಎಲ್ಲರೂ ಸೇರಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಿರಿ. ಇದೇ ರೀತಿ ಎಲ್ಲಾ ಸಾರ್ವಜನಿಕರು ತಮ್ಮ ತಮ್ಮ ಮನೆ ಮತ್ತು ಲೇಔಟ್ ಬಳಿ ಇರುವ ಖಾಲಿ ಜಾಗದಲ್ಲಿ ಹೆಚ್ಚೆಚ್ಚು ಗಿಡಗಳನ್ನು ನೆಡುವ ಮೂಲಕ ಹಸಿರು ಹಾಸನಕ್ಕೆ ಪಣ ತೊಡಬೇಕು. ಹಾಗೂ ಸ್ವಚ್ಛತೆಗೆ ಸ್ಪಂದಿಸಿ ಸಹಕಾರ ಕೊಡಬೇಕು ಎಂದು ಮನವಿ ಮಾಡಿದರು.
ರಸ್ತೆ, ಪಾರ್ಕ್ ಅಭಿವೃದ್ಧಿಗೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಕಾಲದಲ್ಲೇ 144 ಕೋಟಿ ರೂ. ಬಿಡುಗಡೆ ಆಗಿತ್ತು. ಕಾಮಗಾರಿ ಕೂಡ ನಡೆಯುತ್ತಿದೆ. ಶೀಘ್ರದಲ್ಲೇ ರಸ್ತೆ ಕೂಡ ಆಗಲಿದೆ. ನಗರಸಭೆಯಿಂದಲೂ ಕೂಡ ವಿದ್ಯುತ್ ವ್ಯವಸ್ಥೆ, ನಾಮ ಫಲಕ ಸೇರಿದಂತೆ ಮೂಲಭೂತ ಸೌಕರ್ಯದ ಬಗ್ಗೆ ಅಧಿಕಾರಿಗಳನ್ನು ಕರೆಯಿಸಿ ಪರಿಶೀಲಿಸಿ ಹಂತ ಹಂತವಾಗಿ ಅಭಿವೃದ್ಧಿ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಳ್ಳು ಗೋಪಾಲ್ ಮಾತನಾಡಿ, ಈ ಭಾಗದಲ್ಲಿ ವಿದ್ಯುತ್ ಅವಶ್ಯಕತೆ ಇದ್ದು, ಚರಂಡಿ ವ್ಯವಸ್ಥೆ ಮಾಡಬೇಕಾಗಿದೆ. ಈ ಭಾಗದಲ್ಲಿ ಹೆಚ್ಚಿನ ಸಮಸ್ಯೆ ಇದ್ದು, ಶಾಸಕರು ಗಮನ ನೀಡಬೇಕು. ಇದು ನಗರದ ಹೃದಯ ಭಾಗದಲ್ಲಿದ್ದು, ವಿಶೇಷ ಆಸಕ್ತಿವಹಿಸಿ ಅಭಿವೃದ್ಧಿ ಮಾಡಬೇಕಾಗಿದೆ ಎಂದು ಶಾಸಕರಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ವಲಯ ಅರಣ್ಯಾಧಿಕಾರಿ ಲಕ್ಕರ್ ನಾಯಕ್, ಉಪ ವಲಯ ಅರಣ್ಯ ಅಧಿಕಾರಿ ಆರ್. ಮಂಜುನಾಥ್, ಅರಣ್ಯ ನಿರೀಕ್ಷಕ ಸಂತೋಷ್, ಕನಕ ಕ್ಷೇಮಾಭಿವೃದ್ಧಿ ಸಂಘದ ರಾಮು ಇತರರು ಉಪಸ್ಥಿತರಿದ್ದರು.