ಪಿ.ಮಂಜುನಾಥರೆಡ್ಡಿ ಬಾಗೇಪಲ್ಲಿ
ಪ್ರತಿನಿತ್ಯ ಲಕ್ಷಾಂತರ ರೂಪಾಯಿ ಕಮಿಷನ್ ಪಡೆದುಕೊಳ್ಳುತ್ತಿರುವ ಬಾಗೇಪಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಡಳಿತ ಮಂಡಳಿ, ದಲ್ಲಾಳಿಗಳು ಹಾಗೂ ರೈತರಿಗೆ ಮೂಲ ಸೌಕರ್ಯ ಕಲ್ಪಿಸುವಲ್ಲಿ ವಿಫಲವಾಗಿದೆ. ಹಾಗಾಗಿ ದಲ್ಲಾಳಿಗಳು ಟೊಮ್ಯಾಟೊ ವ್ಯಾಪಾರ ವಹಿವಾಟಿಗಾಗಿ ಖಾಸಗಿ ಸ್ಥಳಗಳ ಮೊರೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬಾಗೇಪಲ್ಲಿ ಪಟ್ಟಣದ ಟಿಬಿ ಕ್ರಾಸ್‌ನಲ್ಲಿ 5 ಎಕರೆ ವಿಸ್ತೀರ್ಣದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ಮಿಸಿ ಎರಡು ದಶಕಗಳೇ ಕಳೆದರೂ ಇಂದಿಗೂ ಕನಿಷ್ಠ ಮೂಲಸೌಕರ್ಯ ಕಲ್ಪಿಸಿ. ಮಾರುಕಟ್ಟೆ ಆವರಣದಲ್ಲಿ ನಿತ್ಯ ಸರಾಸರಿ 1 ಕೋಟಿ ರೂ. ಗೂ ಅಧಿಕ ವ್ಯಾಪಾರ ನಡೆಯುತ್ತಿದ್ದರೂ, ರೈತರಿಗೆ ಸುಸಜ್ಜಿತ ವಿಶ್ರಾಂತಿ ಗೃಹ ಇಲ್ಲ, ಕುಡಿಯಲು ಶುದ್ಧ ನೀರಿಲ್ಲ ಜತೆಗೆ ಹರಾಜು ಕಟ್ಟೆಯೂ ಇಲ್ಲ.
ರೈತರ ವಿಶ್ರಾಂತಿ ಗೃಹದಲ್ಲಿ ಹೊರ ರಾಜ್ಯದ ಕಾರ್ಮಿಕರು ನೆಲೆಸಿದ್ದರೂ ಅಧಿಕಾರಿಗಳು ತಲೆಕೆಡಿಸಿಕೊಳ್ಳುತ್ತಿಲ್ಲ. ಮಾರುಕಟ್ಟೆ ಆವರಣದಲ್ಲಿರುವ ಕುಡಿಯುವ ನೀರಿನ ಶುದ್ಧೀಕರಣ ಘಟಕ ಕೆಟ್ಟು ಎರಡು ವರ್ಷಗಳೇ ಕಳೆದರೂ ಯಾರೊಬ್ಬರು ದುರಸ್ತಿಗೆ ಮುಂದಾಗದ ಕಾರಣ ಶುದ್ಧೀಕರಣ ಘಟಕ ಪ್ರದೇಶ ಶೌಚಗೃಹವಾಗಿ ಮಾರ್ಪಟ್ಟಿದೆ.
ಎಪಿಎಂಸಿ ಸಮಸ್ಯೆಗಳ ಆಗರ
ಬಾಗೇಪಲ್ಲಿ ತಾಲೂಕು ಸೇರಿ ಆಂಧ್ರಪ್ರದೇಶದ ಬಹುತೇಕ ಗ್ರಾಮಗಳಲ್ಲಿ ಬೆಳೆಯುವ ಟೊಮ್ಯಾಟೊ ಹೊತ್ತು ತರುವ ರೈತರಿಗೆ ಮಾರುಕಟ್ಟೆ ಆವರಣದಲ್ಲಿ ಹರಾಜು ಕಟ್ಟೆಯೂ ಇಲ್ಲ. ಒಂದು ವರ್ಷದಿಂದ ಹಲವು ಮಂಡಿ ವ್ಯಾಪಾರಸ್ಥರು ಖಾಸಗಿ ಮಾಲೀಕತ್ವದ ಜಮೀನುಗಳನ್ನು ಬಾಡಿಗೆಗೆ ಪಡೆದು ತಾತ್ಕಾಲಿಕ ಶೆಡ್ ನಿರ್ಮಿಸಿಕೊಂಡು ಮಂಡಿಗಳನ್ನು ನಿರ್ವಹಿಸುತ್ತಿದ್ದಾರೆ. ಮಾರುಕಟ್ಟೆ ಆವರಣದ ಮುಂಭಾಗದ ಮುಖ್ಯ ರಸ್ತೆಯೂ ಹರಾಜು ಕಟ್ಟೆ ಆಗಿದ್ದು, ಟ್ರಾಫಿಕ್ ಸಮಸ್ಯೆಗೂ ಕಾರಣವಾಗಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಇಷ್ಟೆಲ್ಲಾ ಅವಾಂತರ, ಸಮಸ್ಯೆಗಳು ಉದ್ಭವಿಸಿದ್ದರೂ 5 ವರ್ಷಗಳಿಂದ ಕಾಯಂ ಅಧಿಕಾರಿಗಳನ್ನು ನೇಮಕ ಮಾಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ.
ಬಾಗೇಪಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಕಾಯಂ ಅಧಿಕಾರಿಗಳು ಇಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ಜತೆ ಚರ್ಚಿಸಿ ಕಾಯಂ ಅಧಿಕಾರಿಗಳ ನೇಮಕಕ್ಕೆ ಮುಂದಾಗುತ್ತೇವೆ. ಪರಗೋಡು ಬಳಿ 25 ಎಕರೆ ವಿಸ್ತೀರ್ಣದಲ್ಲಿ 30 ಕೋಟಿ ರೂ. ವೆಚ್ಚದಲ್ಲಿ ಟೊಮ್ಯಾಟೊ ಮಾರುಕಟ್ಟೆ ನಿರ್ಮಿಸಲಾಗುವುದು. ಖಾಸಗಿ ಲೇಔಟ್‌ನಲ್ಲಿ ಮಂಡಿಗಳನ್ನು ನಿರ್ಮಿಸಿಕೊಂಡು ಟೊಮ್ಯಾಟೊ ಮಾರುಕಟ್ಟೆ ವಹಿವಾಟು ನಡೆಸುತ್ತಿರುವ ದಲ್ಲಾಳಿಗಳ ವ್ಯಾಪಾರಕ್ಕೆ ಕಡಿವಾಣ ಹಾಕುವಂತೆ ತಹಸೀಲ್ದಾರ್‌ಗೆ ಕಟ್ಟುನಿಟ್ಟಿನ ಆದೇಶ ನೀಡುತ್ತೇವೆ. ದಲ್ಲಾಳಿಗಳು ರೈತರಿಂದ ಅಧಿಕ ಕಮಿಷನ್ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಶೀಘ್ರವೇ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಲ್ಪಿಸುತ್ತೇವೆ. -ಎಸ್.ಎನ್.ಸುಬ್ಬಾರೆಡ್ಡಿ, ಶಾಸಕ.