ಅಭಿಲಾಷ್ ತಿಟ್ಟವಾರನಹಳ್ಳಿ ಚನ್ನಪಟ್ಟಣ
ತಾಲೂಕಿನ ಶಕ್ತಿಕೇಂದ್ರವಾದ ತಾಲೂಕು ಕಚೇರಿಯಲ್ಲೇ ಅವ್ಯವಸ್ಥೆ ತಾಂಡವವಾಡುತ್ತಿದೆ. ಒಂದೆಡೆ ಕಚೇರಿಯಲ್ಲಿ ಮೂಲಸೌಕರ್ಯ ಕೊರತೆಯಾದರೆ, ಮತ್ತೊಂದೆಡೆ ಸಣ್ಣ-ಪುಟ್ಟ ಕೆಲಸಗಳಿಗೂ ಅಲೆದಾಡಿಸುವ ಸಿಬ್ಬಂದಿ ವರ್ಗದ ಕಾರ್ಯವೈಖರಿಯಿಂದಾಗಿ ಈ ಶಕ್ತಿಕೇಂದ್ರ ಕಳೆಗುಂದಿದೆ.
ಪ್ರತಿದಿನ ಸಾವಿರಾರು ಮಂದಿ ಬಂದು ಹೋಗುವ ಕಚೇರಿಯಲ್ಲಿ ಮೂಲಸೌಕರ್ಯಗಳು ಮರೀಚಿಕೆಯಾಗಿವೆ.
ಸಾರ್ವಜನಿಕರ ಬಳಕೆಗೆಂದು ಶೌಚಗೃಹ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದು ಇಲ್ಲಿನ ಅವ್ಯವಸ್ಥೆಗೆ ಹಿಡಿದ ಕನ್ನಡಿಯಂತಿದೆ. ಕಚೇರಿ ಒಳಾಂಗಣದಲ್ಲಿ ಹಾಗೂ ಹೊರಾಂಗಣದಲ್ಲಿರುವ ಶೌಚಗೃಹಗಳಿಗೆ ನಿರ್ವಹಣೆ ಇಲ್ಲದೇ ಬೀಗ ಹಾಕಲಾಗಿದೆ. ಹೀಗಾಗಿ, ಕಚೇರಿಗೆ ಬರುವ ಜನರಿಗೆ ಕಚೇರಿ ಆವರಣದ ಗೋಡೆಗಳು ಹಾಗೂ ಬಯಲೇ ಗತಿಯಾಗಿದೆ. ಇನ್ನು ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ತಹಸೀಲ್ದಾರ್ ಕೊಠಡಿಯ ಪಕ್ಕದಲ್ಲಿರುವ ಶುದ ್ಧಕುಡಿಯುವ ನೀರಿನ ಟಕ ಕೆಟ್ಟು ನಿಂತಿದೆ. ಕಚೇರಿಗೆ ಬರುವವರು ಬಾಯಾರಿದರೆ ಕಚೇರಿ ಆವರಣದಲ್ಲಿರುವ ಹೋಟೆಲ್‌ಗಳನ್ನೇ ಆಶ್ರಯಿಸಬೇಕಾಗಿದೆ.
ಸ್ವಚ್ಛತೆಯೂ ಇಲ್ಲ : ಇನ್ನು ಕಚೇರಿ ಒಳಗೆ ಹಾಗೂ ಹೊರಗೆ ಸ್ವಚ್ಛತೆ ಮರೀಚಿಕೆಯಾಗಿದೆ. ಕಚೇರಿ ಮೇಲ್ಛಾವಣಿ ಹಾಗೂ ಕಾರಿಡಾರ್‌ನಲ್ಲಿ ಎಲ್ಲೆಂದರಲ್ಲಿ ಕಸ ಬಿದ್ದಿದೆ. ಕಚೇರಿ ಎದುರು ಗಿಡ-ಗಂಟಿಗಳು ಬೆಳೆದು ನಿಂತಿರುವುದು ಶಕ್ತಿಕೇಂದ್ರದ ಅಂದ ಕೆಡಿಸಿದೆ. ಹಾಗೂ ಬೇಕಾಬಿಟ್ಟಿ ವಾಹನಗಳ ನಿಲುಗಡೆ ಹಾಗೂ ಅಶುಚಿತ್ವ ಕಚೇರಿಯನ್ನು ಅವ್ಯವಸ್ಥೆಯ ಆಗರವಾಗಿಸಿದೆ.
ಸಿಬ್ಬಂದಿ ದರ್ಬಾರ್: ತಾಲೂಕಿನ ತಹಸೀಲ್ದಾರ್‌ಗಳ ವರ್ಗಾವಣೆ ಪ್ರಹಸನ ಹಾಗೂ ಇನ್ನಿತರ ಕಾರಣದಿಂದಾಗಿ ಕಂದಾಯ ಇಲಾಖೆ ನೌಕರರು ಹಾಗೂ ಸಿಬ್ಬಂದಿ ತಹಸೀಲ್ದಾರ್ ಹಿಡಿತಕ್ಕೆ ಸಿಗದಂತಾಗಿದ್ದಾರೆ. ಇಲ್ಲಿನ ಸಿಬ್ಬಂದಿ ಸಣ್ಣಪುಟ್ಟ ಕೆಲಸಕ್ಕೂ ಸಾರ್ವಜನಿಕರನ್ನು ಅಲೆದಾಡಿಸುತ್ತಾರೆ. ಇನ್ನು ರೆಕಾರ್ಡ್ ರೂಂ ಭ್ರಷ್ಟಾಚಾರದ ಕೊಂಪೆಯಾಗಿದೆ. ಹಣ ನೀಡದಿದ್ದರೆ ಜಮೀನಿಗೆ ಸಂಬಂಧಪಟ್ಟ ಕಡತಗಳನ್ನು ಪಡೆಯಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ಇದೆ. ಕಚೇರಿಯ ಕೆಳ ಅಂತಸ್ತಿನಲ್ಲಂತೂ ಕಾಂಚಾಣ ಉಳ್ಳವರಿಗೆ ವಾತ್ರ ಮೀಸಲು ಎಂಬ ಸ್ಥಿತಿ ಇದೆ. ಹಣ ಕೊಟ್ಟರೆ ಕೆಲಸ ಜರೂರ್, ಇಲ್ಲ ನಾಳೆ ಬನ್ನಿ ಎಂಬ ಉತ್ತರ ಸಿದ್ಧವಾಗಿರುತ್ತದೆ.
ಬಗೆಹರಿಸುವವರೇ ತಹಸೀಲ್ದಾರ್?: ತಾಲೂಕಿನ ನೂತನ ತಹಸೀಲ್ದಾರ್ ಆಗಿ ಕೆಲದಿನಗಳ ಹಿಂದೆ ಅಧಿಕಾರ ಸ್ವೀಕರಿಸಿರುವ ಹರ್ಷವರ್ಧನ್ ತಾಲೂಕು ಕಚೇರಿಯ ಅವ್ಯವಸ್ಥೆಯನ್ನು ಬಗೆಹರಿಸುವವರೇ ಹಾಗೂ ಜಡ್ಡುಗಟ್ಟಿರುವ ವ್ಯವಸ್ಥೆಗೆ ಚುರುಕು ಮುಟ್ಟಿಸುವರೇ ಎಂಬುದು ಸಾರ್ವಜನಿಕರ ನಿರೀಕ್ಷೆಯಾಗಿದೆ. ಕಚೇರಿಯಲ್ಲಿನ ಶೌಚಾಲಯ ಅವ್ಯವಸ್ಥೆ ಸರಿಪಡಿಸುವುದು, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದು, ಸಾರ್ವಜನಿಕರಿಗೆ ಆಸನಗಳ ವ್ಯವಸ್ಥೆ ಕಲ್ಪಿಸುವ ಜೊತೆಗೆ, ಕಚೇರಿ ಒಳಗೆ ಹಾಗೂ ಹೊರಗೆ ಸ್ವಚ್ಛತೆ ಕಾಪಾಡುವ ಕೆಲಸಕ್ಕೆ ಮೊದಲು ಕೈ ಹಾಕಬೇಕಿದೆ. ಇದರೊಂದಿಗೆ ನಿಮ್ಮ ಕಣ್ಣಿಗೆ ಕಾಣದ ಹಾಗೂ ನಿಮ್ಮ ಸಮೀಪವೇ ನಡೆಯುತ್ತಿರುವ ಭ್ರಷ್ಟಾಚಾರಕ್ಕೂ ಬ್ರೇಕ್ ಹಾಕುವ ಮೂಲಕ ತಾವೊಬ್ಬ ಜನಪರ ತಹಸೀಲ್ದಾರ್ ಎಂಬುದನ್ನು ನಿರೂಪಿಸಬೇಕಿದೆ. ಇದು ಪತ್ರಿಕೆ ಹಾಗೂ ಸಾರ್ವಜನಿಕರ ಆಶಯವಾಗಿದೆ.