ಅರಸೀಕೆರೆ: ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಲಕ್ಷ್ಮೀಪುರ ಬಡಾವಣೆಯ 14ನೇ ವಾರ್ಡ್‌ನ ದತ್ತಾತ್ರೇಯ ಕಾಂಪೌಂಡ್ ನಿವಾಸಿಗಳು ನಗರಸಭೆ ಅಧ್ಯಕ್ಷ ಸಿ.ಗಿರೀಶ್ ಅವರಿಗೆ ಬುಧವಾರ ಸಂಜೆ ಮನವಿ ಸಲ್ಲಿಸಿದರು.
ಮುಖಂಡ ರೈಲ್ವೆ ರಾಜಣ್ಣ ಮಾತನಾಡಿ, ಹದಿನೈದು ವರ್ಷಗಳಿಂದ ಸುಗಮ ಸಂಚಾರಕ್ಕೆ ಸೂಕ್ತ ರಸ್ತೆಯಿಲ್ಲದೆ ಜನರು ಪರದಾಡುವಂತಾಗಿದೆ. ಜತೆಗೆ ಮಳೆ ಸುರಿದ ವೇಳೆ ಮನೆಗಳಿಗೆ ನೀರು ನುಗ್ಗಿ ಅನೇಕ ಅವಾಂತರ ಸೃಷ್ಟಿಯಾಗುತ್ತಿದ್ದು, ದತ್ತಾತ್ರೇಯ ಕಾಂಪೌಂಡ್ ನಿವಾಸಿಗಳು ಇನ್ನಿಲ್ಲದ ಕಿರಿಕಿರಿ ಅನುಭವಿಸುತ್ತಿದ್ದಾರೆ. ರೈಲ್ವೆ ಹಳಿ ಬದಿಯ ಮನೆಗಳಿಗೆ ಸಮರ್ಪಕ ರಸ್ತೆ ನಿರ್ಮಾಣವಾಗಿಲ್ಲ. ವಿದ್ಯುದ್ದೀಪಗಳು ಇಲ್ಲದ ಕಾರಣ ರಾತ್ರಿ ಭಯದಿಂದ ಓಡಾಟ ನಡೆಸುವ ಪರಿಸ್ಥಿತಿ ಉದ್ಭವಿಸಿದ್ದು, ಖುದ್ದು ಸ್ಥಳ ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ನಗರಸಭೆ ಅಧ್ಯಕ್ಷ ಸಿ.ಗಿರೀಶ್ ಮನವಿ ಸ್ವೀಕರಿಸಿ, ಹದಿನೈದು ವರ್ಷಗಳ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ ಎನ್ನುವ ಮಾತುಗಳು ಅಚ್ಚರಿ ತಂದಿದೆ. ನಾಗರಿಕರು ಬದಲಾವಣೆಗೆ ತೆರೆದುಕೊಳ್ಳದಿದ್ದರೆ ಇಂತಹ ಸಂಕಷ್ಟ ತಪ್ಪಿದ್ದಲ್ಲ. ಶೀಘ್ರವೇ ಸ್ಥಳ ಪರಿಶೀಲನೆ ನಡೆಸಿ ಮೂಲಸೌಕರ್ಯ ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಹಿರಿಯ ಶುಶ್ರೂಷಕಿ ಸರಸ್ವತಿ, ಸುಶೀಲ, ಮಂಜುಳಾ,ರವಿಕುಮಾರ್ ಇತರರು ಇದ್ದರು.