ಜಿಲ್ಲೆ

ಮೂಲಸೌಕರ್ಯ ಕಲ್ಪಿಸಲು ಆಗ್ರಹ


ಚಾಮರಾಜನಗರ : ಅಗತ್ಯ ಮೂಲಸೌಕರ್ಯ ಒದಗಿಸುವಂತೆ ಆಗ್ರಹಿಸಿ ಶುಕ್ರವಾರ ಹನೂರು ತಾಲೂಕಿನ ನಾಗಣ್ಣನಗರದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.


ರೈತ ಮುಖಂಡ ಪಳನಿಸ್ವಾಮಿ ಮಾತನಾಡಿ, ಗ್ರಾಮದಲ್ಲಿ ಸುಮಾರು 120 ಕುಟುಂಬಗಳು ಕಳೆದ 30 ವರ್ಷಗಳಿಂದಲೂ ವಾಸಿಸುತ್ತಿವೆ. ನಾಗಣ್ಣನಗರ ಈ ಹಿಂದೆ ಅಜ್ಜೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿತ್ತು. ಆದರೆ, ಈಗ ಅಧಿಕಾರಿಗಳು ರಾಮಾಪುರ ಗ್ರಾಪಂಗೆ ಸೇರಿದೆ ಎಂದು ಹೇಳುತ್ತಿದ್ದಾರೆ. ಆದರೆ ನಮ್ಮ ಗ್ರಾಮ ಯಾವುದೇ ಪಂಚಾಯಿತಿಗೂ ಸೇರಿಲ್ಲ. ಇದರಿಂದ ಸರ್ಕಾರದ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.


ಸಾವಿರಾರು ಎಕರೆ ಪ್ರದೇಶ ಆರ್‌ಟಿಸಿಯಲ್ಲಿ ವ್ಯತ್ಯಾಸವಾಗಿದ್ದು, ದೋಷದಿಂದ ಕೂಡಿದೆ. ಅಲ್ಲದೇ, ಕಳೆದ 30 ವರ್ಷಗಳಿಂದ ಕೃಷಿ ಮಾಡುವವರಿಗೆ ಸಾಗುವಳಿ ಪತ್ರ ಮಾತ್ರ ನೀಡಲಾಗಿದೆ. ಆದರೆ ಆರ್‌ಟಿಸಿ ನೀಡಿಲ್ಲ. ಪರಿಣಾಮ ಕೃಷಿ ಇಲಾಖೆಯಿಂದ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೃಷಿ ಪರಿಕರಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.


ಇತ್ತ ಸ್ಮಶಾನ ಸೌಕರ್ಯವಿಲ್ಲ. ಈ ಸಂಬಂಧ ಕಳೆದ 4 ತಿಂಗಳ ಹಿಂದೆ ಹನೂರಿನಲ್ಲಿ ಪ್ರತಿಭಟನೆ ನಡೆಸಲಾಗಿದ್ದು, ಮನವಿ ಸಲ್ಲಿಸಲಾಗಿತ್ತು. ಈ ವೇಳೆ ಅಧಿಕಾರಿಗಳು ಅಗತ್ಯ ಭರವಸೆ ನೀಡಿದ್ದರು. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ತುಂಬಾ ತೊಂದರೆ ಅನುಭವಿಸುವಂತಾಗಿದೆ. ಈ ದಿಸೆಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.


ಆದ್ದರಿಂದ ಜಿಲ್ಲಾಡಳಿತ ಇನ್ನು ಒಂದು ವಾರದೊಳಗೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಗತ್ಯ ಮೂಲಸೌಕರ್ಯವನ್ನು ಒದಗಿಸಲು ಅಗತ್ಯ ಕ್ರಮವಹಿಸಬೇಕು. ಜತೆಗೆ ಜಮೀನಿನ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲವಾದಲ್ಲಿ ಗ್ರಾಮಸ್ಥರೆಲ್ಲರೂ ಈ ಬಾರಿಯ ವಿಧಾನಸಭೆ ಚುನಾವಣೆಯನ್ನು ಬಹಿಷ್ಕರಿಸುವುದರ ಮೂಲಕ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.


ಗಂಗನದೊಡ್ಡಿ ರೈತ ಸಂಘದ ಗ್ರಾಮ ಘಟಕದ ಅಧ್ಯಕ್ಷ ಅಮ್ಜಾದ್‌ಖಾನ್, ಮುಖಂಡರಾದ ವೇಲುಸ್ವಾಮಿ, ಮೊಟ್ಟೆಗೌಂಡರ್, ಶಕ್ತಿವೇಲು ಇತರರು ಇದ್ದರು.