ಜಿಲ್ಲೆ

ಮೂಲಸೌಕರ್ಯ ಕಲ್ಪಿಸದ ಅಧಿಕಾರಿಗಳು, ನೆಲಮಂಗಲದ 20ನೇ ವಾರ್ಡ್‌ನ ನಿವಾಸಿಗಳಿಗಿಲ್ಲ ಪರಿಹಾರ

ಸುಗ್ಗರಾಜು ಜಿ.ಕೆ. ನೆಲಮಂಗಲ

ನಗರದ 20ನೇ ವಾರ್ಡ್‌ನ ರೇಣುಕಾ ನಗರದ ವಿವಿಧ ಬಡಾವಣೆಗಳ ನಾಗರಿಕರಿಗೆ ಸಮರ್ಪಕ ಮೂಲಸೌಕರ್ಯ ಕಲ್ಪಿಸುವಲ್ಲಿ ನಗರಸಭೆ ವಿಫಲವಾಗಿದೆ.

ರೇಣುಕಾ ನಗರದ ಮಲ್ಲಪ್ಪ ಬಡಾವಣೆ, ದೊಡ್ಡಬಳ್ಳಾಪುರ ರಸ್ತೆ, ಕುವೆಂಪು ನಗರದ ಕೆಲವೆಡೆ ಸಮರ್ಪಕ ರಸ್ತೆಗಳಿಲ್ಲ. ಕೆಲವೆಡೆ ಅವೈಜ್ಞಾನಿಕ ಚರಂಡಿಗಳಿಂದಾಗಿ ನಿವಾಸಿಗಳು ಹೈರಾಣಾಗಿದ್ದಾರೆ.

ರೇಣುಕಾ ನಗರದ ಮಲ್ಲಪ್ಪ ಬಡಾವಣೆ ಮುಖ್ಯರಸ್ತೆಯಿಂದ ವಿವಿಧ ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿದ್ದ ಚರಂಡಿ ದುರಸ್ತಿ ಮಾಡಲೆಂದು 25 ದಿನಗಳ ಹಿಂದೆ ಚರಂಡಿಗೆ ಮುಚ್ಚಿದ್ದ ಕಲ್ಲುಗಳನ್ನು ತೆಗೆಯಲಾಗಿದೆ. ಆದರೆ ಈವರೆಗೂ ದುರಸ್ತಿ ಮಾಡಿಲ್ಲ. ಕನಿಷ್ಠ ಕಲ್ಲುಗಳನ್ನು ಸರಿಪಡಿಸಲಾದರೂ ನಗರಸಭೆ ಸಿಬ್ಬಂದಿ ಇತ್ತ ತಿರುಗಿ ನೋಡಿಲ್ಲ.

ಚರಂಡಿ ದುರಸ್ತಿ ಮಾಡದಿರುವುದರಿಂದ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ನಗರಸಭೆ ಪೌರಾಯುಕ್ತರು, ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಕನಿಷ್ಠಪಕ್ಷ ಸ್ಥಳ ಪರಿಶೀಲನೆ ಮಾಡಿ ಅಗತ್ಯ ಕ್ರಮ ಕೈಗೊಳ್ಳದಿರುವುದು ನಾಗರಿಕರ ಬೇಸರಕ್ಕೆ ಕಾರಣವಾಗಿದೆ.

ರೋಗಗಳ ಭೀತಿ:  ರೇಣುಕಾ ನಗರದ ವಿವಿಧ ಬಡಾವಣೆಗಳಲ್ಲಿ ಸಂಗ್ರಹವಾಗುವ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡಿಲ್ಲ. ಬಡಾವಣೆಗಳಲ್ಲಿನ ಬಹುತೇಕ ಚರಂಡಿಗಳು ಮಣ್ಣು, ಕಸದಿಂದ ತುಂಬಿ ನಾರುತ್ತಿವೆ. ಕಲುಷಿತ ನೀರು ಚರಂಡಿ ಬದಲಿಗೆ ರಸ್ತೆಯಲ್ಲೇ ಹರಿವ ಪರಿಸ್ಥಿತಿ ನಿರ್ಮಾಣವಾಗಿದೆ. ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚಿ ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ನಾಗರಿಕರು ಕಾಲಕಳೆಯುವಂತಾಗಿದೆ.

ಅಧಿಕಾರಿಗಳ ನಿರ್ಲಕ್ಷ್ಯ: ಬಸವನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿದ್ದ ರೇಣುಕಾನಗರ ಈಗ ನಗರಸಭೆ ವ್ಯಾಪ್ತಿಗೆ ಒಳಪಟ್ಟು ಎರಡೂವರೆ ವರ್ಷಗಳೇ ಕಳೆದರೂ ಯಾವೊಬ್ಬ ಅಧಿಕಾರಿಗಳು ಬಡಾವಣೆಗಳಿಗೆ ತೆರಳಿ ನಾಗರಿಕರ ಕಷ್ಟ ಕೇಳಿಲ್ಲ. ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕಾದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ನಾಗರಿಕರು ಹಿಡಿಶಾಪ ಹಾಕಿದ್ದಾರೆ.

ಕಸವನ್ನೂ ಸಂಗ್ರಹಿಸದ ನಗರಸಭೆ: ನಗರಸಭೆ ಪೌರಕಾರ್ಮಿಕರು ಮುಖ್ಯರಸ್ತೆಯ ಮನೆಗಳಲ್ಲಿ ಮಾತ್ರ ಕಸ ಸಂಗ್ರಹಿಸುತ್ತಿದ್ದಾರೆ. ಉಳಿದ ಮನೆಗಳಲ್ಲಿ ಕಸಕ್ಕೆ ಮುಂದಾಗುತ್ತಿಲ್ಲ. ಇದರಿಂದ ಅನಿವಾರ್ಯವಾಗಿ ರಸ್ತೆಯಲ್ಲಿ ಕಸ ಬೀಳುತ್ತಿದ್ದು, ಬಡಾವಣೆಯಲ್ಲಿ ಅನೈರ್ಮಲ್ಯ ಸೃಷ್ಟಿಯಾಗಲು ನಗರಸಭೆಯೇ ಕಾರಣವಾಗಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.

ವಾರ್ಡ್ ವ್ಯಾಪ್ತಿಯಲ್ಲಿ ಸಮಸ್ಯೆ ಹೆಚ್ಚುತ್ತಲೇ ಇವೆ. ಇನ್ನಾದರೂ ನಗರಸಭೆ ಅಧಿಕಾರಿಗಳು ರಸ್ತೆ, ಚರಂಡಿ ದುರಸ್ತಿ ಸೇರಿ ವಾರ್ಡ್‌ನಲ್ಲಿ ಉದ್ಭವಿಸಿರುವ ಕಸದ ಸಮಸ್ಯೆಗೆ ಪರಿಹಾರ ಒದಗಿಸಬೇಕು. ಇಲ್ಲವಾದಲ್ಲಿ ಬಡಾವಣೆಗಳ ನಿವಾಸಿಗಳು ಒಟ್ಟಾಗಿ ನಗರಸಭೆ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದು ಅನಿವಾರ್ಯ. ಕೆ.ವಸಂತ್, ನಗರಸಭೆ ನಾಮನಿರ್ದೇಶಿತ ಸದಸ್ಯ ರೇಣುಕಾ ನಗರದಲ್ಲಿ ಸಮಸ್ಯೆಗಳನ್ನು ಹೇಳಿಕೊಳ್ಳಲು ಜನಪ್ರತಿನಿಧಿಗಳಿಲ್ಲ. ನಾಗರಿಕರಿಗೆ ತೊಂದರೆ ಆಗುತ್ತಿದ್ದರೂ ಅಧಿಕಾರಿಗಳು ತಲೆಕಡೆಸಿಕೊಳ್ಳುತ್ತಿಲ್ಲ. ಸಮಸ್ಯೆಯ ದುಷ್ಪರಿಣಾಮವನ್ನು ಸ್ಥಳೀಯ ನಾಗರಿಕರು ಅನುಭವಿಸುವಂತಾಗಿದೆ. ಭಾಗ್ಯಮ್ಮ, ಸ್ಥಳೀಯ ನಿವಾಸಿ ಸಮಸ್ಯೆ ಇರುವ ವಾರ್ಡ್‌ಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ, ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಮಂಜುನಾಥ್, ಪೌರಾಯುಕ್ತ, ನೆಲಮಂಗಲ