ಮುದ್ದೇಬಿಹಾಳ ಹಡಲಗೇರಿ ರಸ್ತೆಯಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಗುರುವಾರ ವಿಜಯಪುರ ಉಪವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. 
ಜಿಲ್ಲೆ

ಮೂಲಸೌಕರ್ಯ ಒದಗಿಸಲು ಕ್ರಮ

ಮುದ್ದೇಬಿಹಾಳ: ಪಟ್ಟಣದ ಹಡಲಗೇರಿ ರಸ್ತೆಯಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಗುರುವಾರ ವಿಜಯಪುರ ಉಪವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸರ್ಕಾರಿ ಆಸ್ಪತ್ರೆಯಲ್ಲಿ ತಾಲೂಕುಮಟ್ಟದ ಅಧಿಕಾರಿಗಳೊಂದಿಗೆ ಆರೋಗ್ಯ ರಕ್ಷಾ ಸಮಿತಿ ಸಭೆ ನಡೆಸಿದ ನಂತರ ತಾಲೂಕು ಆಸ್ಪತ್ರೆಯ ವಾರ್ಡ್‌ಗಳಿಗೆ ಭೇಟಿ ನೀಡಿ ರೋಗಿಗಳೊಂದಿಗೆ ಆಸ್ಪತ್ರೆಯಲ್ಲಿಯ ಸಮಸ್ಯೆಗಳ ಕುರಿತು ವಿಚಾರಿಸಿದರು.

ಆಸ್ಪತ್ರೆಯ ಹೆರಿಗೆ, ಜನರಲ್ ವಾರ್ಡ್‌ಗಳನ್ನು ಪರಿಶೀಲಿಸಿದ ವೇಳೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಅನೀಲಕುಮಾರ ಶೇಗುಣಸಿ ಮಾತನಾಡಿ, ಮಳೆ ಬಂದಾಗ ವಾರ್ಡ್‌ನ ಛಾವಣಿ ಸೋರುವ ಕುರಿತು ಮಾಹಿತಿ ನೀಡಿದರು.

ಡಯಾಲಿಸಿಸ್ ಕೇಂದ್ರಕ್ಕೆ ಭೇಟಿ ನೀಡಿದ ವೇಳೆ ಡಯಾಲಿಸಿಸ್ ವಿಭಾದ ಮಾಲಾಶ್ರೀ ತೋಟದ ಮಾತನಾಡಿ, ಆಸ್ಪತ್ರೆಯಲ್ಲಿ ಒಟ್ಟು ಎರಡು ಡಯಾಲಿಸಿಸ್ ಯಂತ್ರವಿರುವ ಪೈಕಿ ಒಂದು ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಒಂದನ್ನು ದುರಸ್ತಿ ಮಾಡಬೇಕಿದೆ. ಎಸಿ ಇಲ್ಲ, ತಮಗೆ ಸರಿಯಾಗಿ ವೇತನ ಸಹ ಸಿಗುತ್ತಿಲ್ಲವೆಂದು ಉಪವಿಭಾಗಾಧಿಕಾರಿ ಮುಂದೆ ಅಳಲು ತೋಡಿಕೊಂಡರು.

ಬಳಿಕ ಉಪವಿಭಾಗಾಧಿಕಾರಿ ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕು ಮಟ್ಟದ ಪ್ರಮುಖ ಅಧಿಕಾರಿಗಳೊಂದಿಗೆ ಆರೋಗ್ಯ ರಕ್ಷಾ ಸಮಿತಿ ಸಭೆ ನಡೆಸಿ ಆಸ್ಪತ್ರೆಯ ಪ್ರತಿ ವಾರ್ಡ್‌ಗಳಿಗೆ ಭೇಟಿ ಮಾಡಿ ಪರಿಶೀಲನೆ ಮಾಡಿದ್ದೇವೆ. ತಾಲೂಕು ಆಸ್ಪತ್ರೆಗೆ ಬೇಕಾದ ಮೂಲಸೌಕರ್ಯಗಳನ್ನು ಒದಗಿಸುವ ಕುರಿತು ಮೇಲಧಿಕಾರಿಗಳೊಂದಿಗೆ ಚರ್ಚೆ ಮಾಡುತ್ತೇನೆ. ಡಯಾಲಿಸಿಸ್ ಸೇವೆಯನ್ನು ಗುತ್ತಿಗೆ ಆಧಾರದ ಮೇಲೆ ನೀಡಲಾಗಿದೆ. ಈ ಸಮಸ್ಯೆ ರಾಜ್ಯದ ಎಲ್ಲಾ ಆಸ್ಪತ್ರೆಯಲ್ಲಿ ಇದೆ. ವೇತನ ಸಮಸ್ಯೆ ಇದೆ. ಈ ಕುರಿತು ಸಹ ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದರು.

ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಶೌಚಗೃಹ ನೀರಿನ ಪೈಪ್ ಜೋಡಣೆ, ವಿದ್ಯುತ್ ವೈಯರ್ ಅಳವಡಿಕೆ, ಆಸ್ಪತ್ರೆಯ ಛಾವಣಿ ದುರಸ್ತಿ, ಟೈಲ್ಸ್ ಅಳವಡಿಕೆ, ಶೌಚಾಲಯ ದುರಸ್ತಿ, ನವಜಾತ ಶಿಶು ನಿರ್ವಹಣೆ ಕೇಂದ್ರದ ಗೋಡೆಗಳಿಗೆ ಟೈಲ್ಸ್ ಜೋಡಣೆ, ಎಸಿ ಅಳವಡಿಕೆ, ಆಸ್ಪತ್ರೆಗೆ ಬಣ್ಣ ಹಚ್ಚುವುದು ಸೇರಿದಂತೆ ಅನೇಕ ಮೂಲಸೌಕರ್ಯಗಳ ಕುರಿತು ಚರ್ಚೆ ಮಾಡಲಾಗಿದೆ ಎಂದರು.

ತಹಸೀಲ್ದಾರ್ ರೇಖಾ ಟಿ., ತಾಪಂ ಇಒ ಸಂಜೀವ ಜನ್ನೂರ, ತಾಲೂಕು ವೈದ್ಯಾಧಿಕಾರಿ ಡಾ. ಸತೀಶ ತಿವಾರಿ, ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಅನೀಲಕುಮಾರ ಶೇಗುಣಸಿ, ಹೆಸ್ಕಾಂ ಎಇಇ ಆರ್.ಎನ್. ಹಾದಿಮನಿ, ಪಿಎಸ್‌ಐ ಆರ್ೀ ಮುಶಾಪುರಿ, ಸಂಜಯ ಭೋಸಲೆ ಇದ್ದರು.