ಜಿಲ್ಲೆ

ಮೂಲಸೌಕರ್ಯ ಒದಗಿಸಲು ಕೋರಿ ಮನವಿ ಸಲ್ಲಿಕೆ

ಚಾಮರಾಜನಗರ: ತಾಲೂಕಿನ ಮಂಗಲ ಹೊಸೂರು ಗ್ರಾಮಕ್ಕೆ ಮೂಲಸೌಕರ್ಯ ಒದಗಿಸಬೇಕೆಂದು ಒತ್ತಾಯಿಸಿ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಗಾನ ಗಂಧರ್ವ ಸಾಂಸ್ಕೃತಿಕ ಕಲಾ ವೇದಿಕೆ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್ ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದಾ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು. ಗ್ರಾಮದಲ್ಲಿ ಪರಿಶಿಷ್ಟ ಜನಾಂಗದವರಿಗೆ ಸ್ಮಶಾನವಿಲ್ಲ. ಒಂದೇ ಒಂದು ಬಸ್ ಸಂಚಾರವೂ ಇಲ್ಲ. ಅಂಗನವಾಡಿ ಕೇಂದ್ರ ಅಪಾಯದ ಅಂಚಿನಲ್ಲಿದ್ದು, ಕುಸಿದು ಬೀಳುವ ಸ್ಥಿತಿಯಲ್ಲಿದೆ. ರಸ್ತೆಗೆ ಡಾಂಬರೀಕರಣ ಮಾಡಿಲ್ಲ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಒಳಾಗಿರುವ ಗ್ರಾಮವನ್ನು ಅಭಿವೃದ್ಧಿ ಪಡಿಸಬೇಕೆಂದು ಕೋರಿದರು. ವೇದಿಕೆ ಅಧ್ಯಕ್ಷ ಎಚ್.ಎಂ.ಶಿವಣ್ಣ ಮತ್ತು ಗ್ರಾಮಸ್ಥರಾದ ಗುರುಮಲ್ಲಪ್ಪ, ಯಜಮಾನ ಮಲ್ಲಯ್ಯ ಇದ್ದರು.