ವಾಡಿ: ಕೆಸರು ಗದ್ದೆಯಾದ ರಸ್ತೆ, ರೋಡ್ ಮೇಲೆಯೇ ಹರಿದಾಡುವ ಚರಂಡಿ ನೀರು, ಸುಗಮ ಸಂಚಾರಕ್ಕೆ ಪ್ರಾಯಾಸ ಪಡುವ ಜನರು. ಇದು ಕಮರವಾಡಿಯ ದಲಿತರ ಓಣಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ದುಸ್ಥಿತಿಯಾಗಿದೆ.
ಕಮರವಾಡಿ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಾಗಿದ್ದು, ಮೂಲ ಸೌಕರ್ಯಗಳು ಮರೀಚಿಕೆಯಾಗಿವೆ. ವಾರ್ಡ್ 1ರಲ್ಲಿನ ದಲಿತರ ಓಣಿಗೆ ಸಂಪರ್ಕ ಕಲ್ಪಿಸುವ ಸುಮಾರು 500 ಮೀ. ರೋಡ್ ಸಂಪೂರ್ಣ ಹಾಳಾಗಿದೆ. ಮಣ್ಣಿನ ರೋಡಿನಲ್ಲಿ ಮಳೆಗಾಲದಲ್ಲಿ ಸಂಚಾರ ಕಷ್ಟಕರ, ಇನ್ನುಳಿದ ಸಮಯದಲ್ಲಿ ವಿಪರೀತ ಧೂಳಿನ ಕಾಟವಿರುತ್ತದೆ.
ಸಿಸಿ ರಸ್ತೆ ಹಾಗೂ ಸೂಕ್ತ ಚರಂಡಿಯನ್ನು ನಿರ್ಮಿಸುವಂತೆ ಸ್ಥಳೀಯ ಆಡಳಿತ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಕ್ಯಾರೇ ಎನ್ನುತ್ತಿಲ್ಲ. ಗ್ರಾಮ ಪಂಚಾಯಿತಿಗೆ ಮನವಿಪತ್ರ ಸಲ್ಲಿಸಿದರೂ, ಸ್ಪಂದನೆ ಮಾಡದ ಕಸದ ಬುಟ್ಟಿಗೆ ಎಸೆಯುತ್ತಿದ್ದಾರೆ ಎಂದು ನಿವಾಸಿಗಳು ಕಿಡಿಕಾರಿದ್ದಾರೆ.
ಗ್ರಂಥಾಲಯ, ಅಂಗನವಾಡಿ ಹಾಗೂ ಕೂಸಿನ ಮನೆಗೆ ತೆರಳುವ ರಸ್ತೆಯೂ ಕೆಸರುಮಯವಾಗಿದೆ. ಕೆಲವೊಮ್ಮೆ ಮಕ್ಕಳು ಕೆಸರಿನಲ್ಲಿ ಬಿದ್ದು ಮೈಯಲ್ಲಾ ಕೊಳಚೆ ಮಾಡಿಕೊಂಡಿದ್ದಾರೆ. ಬೈಕ್ ಸವಾರರು ಸಾಕಷ್ಟು ಬಾರಿ ಸ್ಕಿಡ್ ಆಗಿ ರೋಡ್‌ನಲ್ಲಿ ಬಿದ್ದಿದ್ದಾರೆ. ಈಗಲಾದರೂ ಜನಪ್ರತಿನಿಧಿಗಳು ಬಡಾವಣೆಯತ್ತ ಗಮನಹರಿಸಿ, ಅಗತ್ಯ ಮೂಲಕ ಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಜನರು ಒಕ್ಕೊರಲಿನಿಂದ ಒತ್ತಾಯಿಸಿದ್ದಾರೆ.