ಜಿಲ್ಲೆ

ಮೂಲ ಸೌಕರ್ಯ, ಶಾಶ್ವತ ಯೋಜನೆಗಳಿಗೆ ಆದ್ಯತೆ : ಡಾ. ಸಿ.ಎನ್. ಮಂಜುನಾಥ್

ಕನಕಪುರ : ಮೂಲ ಸೌಕರ್ಯ ಹಾಗೂ ಶಾಶ್ವತ ಯೋಜನೆಗಳಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ನೂತನ ಸಂಸದ ಡಾ. ಸಿ.ಎನ್. ಮಂಜುನಾಥ್ ತಿಳಿಸಿದರು.
ನಗರದಲ್ಲಿ ಮೈತ್ರಿ ಪಕ್ಷದಿಂದ ಗುರುವಾರ ಆಯೋಜಿಸಿದ್ದ ಚನ್ನಬಸಪ್ಪ ವೃತ್ತದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಸಾರ್ವಜನಿಕರು, ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿ, ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ, ಮೇಲ್ಸೇತುವೆ, ನನೆಗುದಿಗೆ ಬಿದ್ದಿರುವ ಹೊಸ ರೈಲು ಮಾರ್ಗ ಯೋಜನೆಗಳನ್ನು ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ತಾಲೂಕು ಹಾಗೂ ಜಿಲ್ಲಾ, ಹೋಬಳಿ ಕೇಂದ್ರದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗಿದ್ದು, ಹೃದಯಾಘಾತಕ್ಕೊಳಗಾದ ವ್ಯಕ್ತಿಗೆ ತಕ್ಷಣದಲ್ಲಿ ಚೇತರಿಸಿಕೊಳ್ಳಲು ಚುಚ್ಚುಮದ್ದು ನೀಡಲು ಸರ್ಕಾರಿ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಹೃದಯಾಘಾತ ಸಂಭವಿಸಿದ ಮೂರು ಗಂಟೆಗಳೊಳಗೆ ಈ ಚಿಕಿತ್ಸೆ ಕೊಡಿಸಬೇಕು ಎಂದು ಹೇಳಿದರು.

ಡಾ. ಸಿ.ಎನ್. ಮಂಜುನಾಥ್ ಪತ್ನಿ ಅನಸೂಯಾ ಮಾತನಾಡಿ, ನಿರೀಕ್ಷೆಗೂ ಮೀರಿ ಬಹುಮತದಿಂದ ಡಾ. ಮಂಜುನಾಥ್ ಅವರನ್ನು ಗೆಲ್ಲಿಸಿದ್ದೀರಿ. ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಕ್ಷೇತ್ರದ ಜನರ ಸಮಸ್ಯೆಗೆ ಸ್ಪಂದಿಸಲು ಸದಾ ಸಿದ್ಧರಾಗಿರುವುದಾಗಿ ತಿಳಿಸಿದರು.

ಭವ್ಯ ಮೆರವಣಿಗೆ : ನೂತನ ಸಂಸದ ಸಿ.ಎನ್.ಮಂಜುನಾಥ್ ಅವರ ಕೃತಜ್ಞತಾ ಸಮಾರಂಭಕ್ಕೆ ಅಯ್ಯಪ್ಪ ಸ್ವಾಮಿ ದೇವಾಲಯದಿಂದ ಎಂ.ಜಿ.ರಸ್ತೆ ಮುಖಾಂತರ ಚನ್ನಬಸಪ್ಪ ವೃತ್ತದವರೆಗೆ ಮೆರವಣಿಗೆ ಮುಖಾಂತರ ಕರೆತರಲಾಯಿತು. ಈ ವೇಳೆ ಡೊಳ್ಳು, ತಮಟೆ, ನಗಾರಿ, ಕೀಲು ಬೊಂಬೆಗಳ ಪ್ರದರ್ಶನದೊಂದಿಗೆ ಜಾನಪದ ಕಲಾತಂಡದೊಂದಿಗೆ ಮೆರವಣಿಗೆ ನಡೆಸಲಾಯಿತು. ಕಾರ್ಯಕರ್ತರು ಮತ್ತು ಅಭಿಮಾನಿಗಳಿಗೆ ಸಂಸದರೇ ನೀರು, ಮಜ್ಜಿಗೆ ಪಾನಕ ವಿತರಿಸಿ ಗಮನ ಸೆಳೆದರು.
ಹೊಸ ರೈಲು ಮಾರ್ಗಕ್ಕೆ ಶೀಘ್ರ ಚಾಲನೆ: ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗ ಬೆಂಗಳೂರು, ಕನಕಪುರ, ಸತ್ಯಮಂಗಲ ಹೊಸ ರೈಲು ಮಾರ್ಗಕ್ಕೆ ಮಂಜೂರಾತಿ ನೀಡಿದ್ದರು, ನನೆಗುದಿಗೆ ಬಿದ್ದಿದ್ದ ಈ ಯೋಜನೆಗೆ ಚಾಲನೆ ನೀಡಲು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಚರ್ಚೆ ನಡೆಸಿದ್ದಾರೆ. 16 ಸಾವಿರ ಕೋಟಿ ರೂ. ವೆಚ್ಚದ ರೈಲು ಮಾರ್ಗದ ಯೋಜನೆಗೆ ಕೇಂದ್ರ ಸರ್ಕಾರದ ಅನುಮತಿ ದೊರಕಿದ್ದು, ಈ ಭಾಗದ ಜನರ ಬಹುದಿನಗಳ ಕನಸು ನನಸಾಗುವ ಕಾಲ ದೂರವಿಲ್ಲ ಎಂದು ತಿಳಿಸಿದರು. ಕ್ಷೇತ್ರದ ಜನರು ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಲು ನಮ್ಮ ಮನೆಯ ಬಾಗಿಲು ಸದಾ ತೆರೆದಿರುತ್ತದೆ. ಅಭಿವೃದ್ಧಿ ವಿಚಾರದಲ್ಲಿ ನಾನು ಪಕ್ಷಾತೀತವಾಗಿ ಕರ್ತವ್ಯ ನಿರ್ವಹಿಸುವುದಾಗಿ ತಿಳಿಸಿ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ಒಗ್ಗಟ್ಟಿನಿಂದ ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸುವಂತೆ ಡಾ. ಸಿ.ಎನ್. ಮಂಜುನಾಥ್ ಮನವಿ ಮಾಡಿದರು.