ಮೈಸೂರು: ಮೂಲ ವೇತನಕ್ಕೆ ತಕ್ಕಂತೆ ಪಿಂಚಣಿ ನೀಡಬೇಕು ಎಂದು ರಾಜ್ಯ ಇಪಿಎಸ್-95 ನಿವೃತ್ತ ನೌಕರರ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಮೈಸೂರು ವಿಭಾಗ ಮಟ್ಟದ ಸಮಾವೇಶದಲ್ಲಿ ಒತ್ತಾಯಿಸಲಾಯಿತು.
ನಗರದ ಜಗನ್ಮೋಹನ ಅರಮನೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಸಾವಿರಾರು ನಿವೃತ್ತ ನೌಕರರು ಪಾಲ್ಗೊಂಡು ಉದ್ಯೋಗಿಗಳ ತಮ್ಮ ಹಕ್ಕೊತ್ತಾಯ ಮಂಡಿಸಿದರು.
ಕೇಂದ್ರ ಭವಿಷ್ಯ ನಿಧಿಯ ಸದಸ್ಯ ಎ.ಕೆ. ಪದ್ಮನಾಭನ್ ಮಾತನಾಡಿ, ಹಲವಾರು ವರ್ಷಗಳಿಂದ ಪಿಂಚಣಿ ಹೆಚ್ಚಳ ಮತ್ತು ತುಟ್ಟಿ ಭತ್ಯೆ ಸೇರಿದಂತೆ ಕನಿಷ್ಠ ಪಿಂಚಣಿಯನ್ನು 7500 ರೂ., ನೀಡಬೇಕೆಂದು ಹೋರಾಟ ಮಾಡುತ್ತ ಬಂದಿದ್ದರೂ ಕೇಂದ್ರ ಸರ್ಕಾರ ನಮ್ಮ ಬೇಡಿಕೆ ಬಗ್ಗೆ ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಖಾಸಗಿ ಕಂಪನಿಗಳಲ್ಲಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ನಮ್ಮ ವೇತನ ಕಡಿತ ಮಾಡಿದ ಹಣದಲ್ಲಿ ಪಿಂಚಣಿ ನೀಡಲಾಗುತ್ತಿದ್ದು, ಈಗ ಕೇವಲ 450ರಿಂದ 3 ಸಾವಿರ ರೂ.ವರೆಗೆ ಪಿಂಚಣಿ ದೊರೆಯುತ್ತಿದೆ. ದೇಶದಲ್ಲಿ 60 ಲಕ್ಷಕ್ಕಿಂತಲೂ ಹೆಚ್ಚು ಪಿಂಚಣಿದಾರರು ಇದ್ದು, ಶೇ.50ಕ್ಕಿಂತ ಹೆಚ್ಚು ಜನರಿಗೆ 1 ಸಾವಿರ ರೂ.ಗಿಂತ ಕಡಿಮೆ ಪಿಂಚಣಿ ಸಿಗಲಿದೆ. ಈ ಸಣ್ಣ ಪ್ರಮಾಣದಲ್ಲಿ ಹಣದಲ್ಲಿ ಜೀವನ ನಡೆಸಲು ಸಾಧ್ಯವಿಲ್ಲ ಎಂಬ ಕನಿಷ್ಠ ಜ್ಞಾನವೂ ಸರ್ಕಾರಕ್ಕೆ ಇಲ್ಲ ಎಂದು ಕಿಡಿಕಾರಿದರು.
ಕೆಲ ನೆಪ ಹೇಳಿ ಪಿಂಚಣಿದಾರರನ್ನು ಮೊದಲಿಂದಲೂ ವಂಚಿಸಲಾಗುತ್ತಿದೆ. ಕಾರ್ಮಿಕರು ಸಚಿವರ ಒಪ್ಪಿಗೆ ನೀಡಿದರೆ ಹಣಕಾಸು ಸಚಿವರು ಪಿಂಚಣಿ ನೀಡಲು ಹಿಂದೇಟು ಹಾಕಿರುವ ಘಟನೆಗಳು ನಡೆದಿವೆ. ಹೊಸ ಪಿಂಚಣಿಯ (ಎನ್‌ಪಿಎಸ್)ಯಿಂದ ನಿವೃತ್ತ ನೌಕರರಿಗೆ ಯಾವ ಭದ್ರತೆಯೂ ಇಲ್ಲ. ಸಂಧ್ಯಾಕಾಲದಲ್ಲಿ ಬರುವ ಪಿಂಚಣಿ ಯಾವುದಕ್ಕೂ ಸಾಲುತ್ತಿಲ್ಲ. ಆದ್ದರಿಂದ ಕೂಡಲೇ ಇಪಿಎಸ್-95 ನಿವೃತ್ತ ನೌಕರರ ಪಿಂಚಣಿ ಯೋಜನೆಯ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಈಗಾಗಲೇ ಪಿಂಚಣಿ ನೌಕರರ ಹೋರಾಟಗಳು ಸರ್ಕಾರಕ್ಕೆ ಬಿಸಿ ಮುಟ್ಟಿಸಿದೆ. ಕೆಲವೇ ದಿನಗಳಲ್ಲಿ ದಿಲ್ಲಿಯಲ್ಲಿ ಸಭೆ ನಡೆಸುವ ಉದ್ದೇಶವಿದೆ. ಆದರೆ, ಯೋಜನೆ ಅನುಷ್ಠಾನಕ್ಕೆ ಬರುವವರೆಗೂ ಹೋರಾಟವನ್ನು ನಿಲ್ಲಿಸಬಾರದು. ಈ ಬಗ್ಗೆ ಆಯಾ ಕ್ಷೇತ್ರದ ಸಂಸದರನ್ನು ಪಿಂಚಣಿದಾದರರು ಪ್ರಶ್ನಿಸಿ ಹೋರಾಟ ನಡೆಸಬೇಕು ಎಂದು ಹೇಳಿದರು.
ಕನಿಷ್ಠ ಪಿಂಚಣಿ 7,500 ರೂ. ಮತ್ತು ಕಾಲ ಕಾಲಕ್ಕೆ ತಕ್ಕಂತೆ ತುಟ್ಟಿಭತ್ಯೆ ನೀಡಬೇಕು. ನಿವೃತ್ತ ಇಪಿಎಸ್ ನೌಕರರು ಮರಣ ಹೊಂದಿದರೆ ವಿಧವೆ, ವಿಧುರರಿಗೆ ಶೇ.50ರ ಬದಲು ಶೇ.100ರಷ್ಟು ಪಿಂಚಣಿ ನೀಡಬೇಕು. ಇಪಿಎಸ್ ನೌಕರರಿಗೂ ಇಎಸ್‌ಐ ಮತ್ತು ಬಿಪಿಎಲ್ ಕಾರ್ಡ್ ನೀಡಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಮುಖಂಡ ಕೆ.ಹರೀಶ್ ಗೌಡ, ಪಾಲಿಕೆ ಸದಸ್ಯರಾದ ಎಸ್.ಬಿ.ಎಂ. ಮಂಜು, ಕೆ.ವಿ. ಶ್ರೀಧರ್, ಜೆಡಿಎಸ್ ನಗರಾಧ್ಯಕ್ಷ ಕೆ.ಟಿ. ಚೆಲ್ಲುವೇಗೌಡ, ಒಕ್ಕೂಟದ ಅಧ್ಯಕ್ಷ ಎಸ್.ಪಿ.ನಿಂಗೇಗೌಡ, ಉಪಾಧ್ಯಕ್ಷ ಎನ್.ರಾಜಣ್ಣ, ಪ್ರಧಾನ ಕಾರ್ಯದರ್ಶಿ ಆರ್.ಜಿ. ಮೋಹನ್ ಕೃಷ್ಣ, ಸಹಕಾರ್ಯದರ್ಶಿ ಚಿಕ್ಕಮಂಚಯ್ಯ ಸೇರಿದಂತೆ ಹಲವರು ಇದ್ದರು.