ಜಿಲ್ಲೆ

ಮೂರ್ಛೆಹೋದ ಚಾಲಕ, 8 ಬೈಕ್ ಜಖಂ

ಹುಬ್ಬಳ್ಳಿ: ಪಾಲಿಕೆಯ ಕಸದ ವಾಹನದ ಚಾಲಕನಿಗೆ ಮೂರ್ಛೆ ರೋಗ ಕಾಣಿಸಿಕೊಂಡ ಪರಿಣಾಮ ವಾಹನದ ನಿಯಂತ್ರಣ ತಪ್ಪಿ 8 ಬೈಕ್​ಗಳಿಗೆ ಗುದ್ದಿದ ಘಟನೆ ಗೋಕುಲ ರಸ್ತೆಯ ವಿಮಾನ ನಿಲ್ದಾಣದ ಬಳಿ ಶುಕ್ರವಾರ ಸಂಭವಿಸಿದೆ.

ಚಾಲಕನೊಬ್ಬ ಕಸ ತುಂಬಿಕೊಂಡು ಗೋಕುಲ ರಸ್ತೆ ಕಡೆಗೆ ಹೊರಟಿದ್ದ. ಈ ವೇಳೆ ಆತ ಮೂರ್ಛೆಹೋದ. ಹಾಗಾಗಿ, ವಾಹನವು ಅನಿಯಂತ್ರಿತವಾಗಿ ನುಗ್ಗಿ ರಸ್ತೆಬದಿ ನಿಲ್ಲಿಸಲಾಗಿದ್ದ ಬೈಕ್​ಗಳಿಗೆ ವಾಹನ ಗುದ್ದಿ, ರಸ್ತೆ ಪಕ್ಕ ಹೋಗಿ ನಿಂತಿತು. ಬೈಕ್ ಮಾಲೀಕರು ಹಾಗೂ ಸಾರ್ವಜನಿಕರು ಚಾಲಕನಿಗೆ ಉಂಟಾದ ಸ್ಥಿತಿಯನ್ನು ಅರಿತು, ಪ್ರಥಮೋಪಚಾರ ನೀಡಿ ಆತನನ್ನು ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದರು. ಸ್ಥಳಕ್ಕೆ ಉತ್ತರ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಘಟನೆಯಲ್ಲಿ 8 ಬೈಕ್​ಗಳು ಜಖಂಗೊಂಡಿವೆ. ಈ ಕುರಿತು ದೂರು ದಾಖಲಾಗಿಲ್ಲ.