ದೊಡ್ಡಬಳ್ಳಾಪುರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಮೂರ್ಛೆ ರೋಗದ ಜಾಗೃತಿ ಜಾಥಾದಲ್ಲಿ ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ.ನಾಗರಾಜ್, ಆಸ್ಪತ್ರೆಯ ನರ್ಸೀಂಗ್ ಅಧೀಕ್ಷಕಿ ಶೈಲಜಾ, ಆಡಿಯೋಲಜಿಸ್ಟ್ ದಿನೇಶ್, ಕಚೇರಿ ವ್ಯವಸ್ಥಾಪಕ ನಾರಾಯಣ ಹಾಗೂ ಇತರರು ಇದ್ದರು. 
ಜಿಲ್ಲೆ

ಮೂರ್ಛೆ ರೋಗದ ನಿರ್ಲಕ್ಷ್ಯ ಸಲ್ಲ

ಚಿಕಿತ್ಸೆ ಪಡೆದರೆ ವಾಸಿ | ವೈದ್ಯಾಧಿಕಾರಿ ಡಾ.ಮಂಜುನಾಥ್ ಸಲಹೆ | ಜಾಗೃತಿ ಜಾಥಾ

ದೊಡ್ಡಬಳ್ಳಾಪುರ: ಜಿಲ್ಲಾ ಆರೋಗ್ಯ ಇಲಾಖೆ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆ, ಇಂಡೋ ಗ್ಲೋಬಲ್ ನರ್ಸೀಂಗ್ ಕಾಲೇಜು ಮತ್ತು ಎಸ್‌ವಿ ಇನ್‌ಸ್ಟಿಟ್ಯೂಟ್ ಆಫ್ ನರ್ಸೀಂಗ್ ಸಹಯೋಗದಲ್ಲಿ ವಿಶ್ವಮೂರ್ಚೆ ರೋಗ ದಿನದ ಪ್ರಯುಕ್ತ ಭಾನುವಾರ ನಗರದಲ್ಲಿ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ನಗರದ ಸಾರ್ವಜನಿಕ ಆಸ್ಪತ್ರೆಯಿಂದ ಡಿ.ಕ್ರಾಸ್‌ವರೆಗೆ ಜಾಥಾ ಕೈಗೊಂಡು, ಮೂರ್ಛೆ ರೋಗದ ಬಗ್ಗೆ ಇರುವ ಮೂಢನಂಬಿಕೆ ಮತ್ತು ತಪ್ಪುಕಲ್ಪನೆಯನ್ನು ತೊರೆದು, ಸೂಕ್ತ ಚಿಕಿತ್ಸೆ ಪಡೆದರೆ ರೋಗವಾಸಿಯಾಗಲಿದೆ ಎಂದು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.

ಜಾಥಾಗೆ ಚಾಲನೆ ನೀಡಿದ ವೈದ್ಯಾಧಿಕಾರಿ ಡಾ.ಮಂಜುನಾಥ್ ಮಾತನಾಡಿ, ಮೂರ್ಛೆ ರೋಗವು ಮಿದುಳಿಗೆ ಸಂಬಂಧಪಟ್ಟ ಕಾಯಿಲೆಯಾಗಿದ್ದು, ನಿರಂತರ ತಲೆನೋವು, ಕಣ್ಣುಗಳು ಮಂಜಾಗುವುದು, ಸಂವೇದನಗಳಲ್ಲಿ ಬದಲಾವಣೆ, ತಲೆ ತಿರುಗುವುದು, ವಾಕರಿಕೆ, ಅನಿಯಂತ್ರಿತ ಚಲನವಲನ, ಅತಿಯಾಗಿ ಬೆವರುವಿಕೆ, ಉಸಿರಾಟದ ತೊಂದರೆ ಉಂಟಾಗುವುದು ರೋಗದ ಲಕ್ಷಣಗಳು. ಇಂತಹ ಬದಲಾವಣೆಗಳಾದ ನಿರ್ಲಕ್ಷ್ಯವಹಿಸದೇ ತಕ್ಷಣ ವೈದ್ಯರನ್ನು ಭೇಟಿ ಮಾಡಿ, ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದರು. ಮೂರ್ಛೆ ರೋಗದ ಬಗ್ಗೆ ಬಹಳಷ್ಟು ಮಂದಿಯಲ್ಲಿ ಮೂಢನಂಬಿಕೆ ತಪ್ಪು ಕಲ್ಪನೆಗಳಿದ್ದು, ಹಲವರು ಇದನ್ನು ಶಾಪ ಎಂದು ನಂಬುತ್ತಾರೆ. ಅವೈಜ್ಞಾನಿಕ ಚಿಕಿತ್ಸೆಗಳಿಂದಾಗಿ ರೋಗಿಗೆ ಪ್ರಾಣಾಪಾಯವಾಗುವ ಸಂಭವವಿದೆ. ಅಪಸ್ಮಾರ ಅಥವಾ ಎಪಿಲೆಪ್ಪಿ ದೀರ್ಘಕಾಲದ ಮಿದುಳಿನ ಅಸ್ವಸ್ಥತೆಯಾಗಿದೆ. ಇದು ಮರುಕಳಿಸುವುದರಿಂದ ಫಿಡ್ಸ್‌ಗೆ ಕಾರಣವಾಗುತ್ತದೆ. ಇದ್ದಕ್ಕಿದಂತೆಯೇ ಕಾಣಿಸಿಕೊಳ್ಳುವ ಅಪಸ್ಮಾರ ರೋಗವು ಮನುಷ್ಯನ ಜೀವಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆ ಇದೆ ಎಂದರಲ್ಲದೇ ಮೂರ್ಛೆರೋಗದಿಂದ ಬಾಧಿತ ವ್ಯಕ್ತಿ ಸಾಮಾನ್ಯರಂತೆ ಜೀವನ ನಡೆಸಲು ಸಮುದಾಯದ ಸಹಕಾರ ಅಗತ್ಯ ಎಂದರು. ಜಾಥಾದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.

ಕಾರಣ: ಅನಿಯಂತ್ರಿತ ಸ್ನಾಯು ಸೆಳೆತ , ತಲೆಗೆ ತೀವ್ರ ಗಾಯ, ನರಮಂಡಲದ ಸೋಂಕು., ಆನುವಂಶಿಕ ಸಮಸ್ಯೆ, ಮೆದುಳಿನ ಗೆಡ್ಡೆಗಳು.

ಕಾಯಿಲೆ ಲಕ್ಷಣ: ಅಸಹಜ ಕಣ್ಣಿನ ಚಲನೆ, ಸಂವೇದನೆಯಲ್ಲಿ ಬದಲಾವಣೆ(ಶ್ರವಣ, ದೃಷ್ಟಿ, ರುಚಿ, ವಾಸನೆ, ಮರಗಟ್ಟುವಿಕೆ, ಜುಮ್ಮೆನಿಸುವಿಕೆ), ಬಾಯಿಂದ ಜೊಲ್ಲು ಸುರಿಸುವಿಕೆ ಅಥವಾ ನೊರೆ ಬರುವುದು, ತುಟಿಗಳನ್ನು ಸವರುವುದು, ಕೈಗಳನ್ನು ಉಜ್ಜುವುದು, ಜಗಿಯುವ, ಬೆರಳುಗಳ ಚಲನೆ, ತಾತ್ಕಾಲಿಕ ಗೊಂದಲ, ಯೋಚಿಸುವುದು, ಮಾತನಾಡುವುದು ಅಥವಾ ಅರ್ಥಮಾಡಿಕೊಳ್ಳುವಲ್ಲಿ ತೊಂದರೆ, ಪ್ರಜ್ಞೆ ಅಥವಾ ಅರಿವಿನ ತಾತ್ಕಾಲಿಕ ಮರೆವು.

ಏನು ಮಾಡಬೇಕು? ಏನು ಮಾಡಬಾರದು? ಮೂರ್ಛೆ ಬಂದಾಕ್ಷಣ ರೋಗಿಯ ದೇಹದ ಯಾವುದೇ ಭಾಗಕ್ಕೆ ಅಪಾಯವಾಗದಂತೆ ಕಲ್ಲು, ನೀರು, ಬೆಂಕಿ ಮುಂತಾದವುಗಳಿಂದ ದೂರವಿರಿಸಬೇಕು. ವ್ಯಕ್ತಿಯನ್ನು ಸಮತಟ್ಟಾದ ನೆಲದ ಮೇಲೆ ಮಲಗಿಸಬೇಕು. ವ್ಯಕ್ತಿಯ ಸುತ್ತ ಜನ ಗುಂಪು ಗೂಡದಂತೆ ತಡೆದು, ಉಸಿರಾಟ ಕ್ರಿಯೆ ಸರಾಗವಾಗುವಂತೆ, ನಾಲಿಗೆ ಕಚ್ಚಿಕೊಳ್ಳದಂತೆ ನೋಡಿಕೊಳ್ಳಬೇಕು. ಪ್ರಥಮ ಚಿಕಿತ್ಸೆಯ ಕ್ರಮಗಳನ್ನು ತತಕ್ಷಣಕ್ಕೆ ನೀಡಬೇಕು ಎಂದು ಡಾ.ಡಾ.ಮಂಜುನಾಥ್ ಹೇಳಿದರು.