ಜಿಲ್ಲೆ

ಮೂರ್ಕಣ್ಣುಗುಡ್ಡ ನಿವಾಸಿಗಳನ್ನು ಒಕ್ಕಲೆಬ್ಬಿಸಲು ಹುನ್ನಾರ:ಬಿ.ಕೆ.ಸುರೇಶ್ ಆರೋಪ

ಹಾಸನ: ಸಕಲೇಶಪುರ ತಾಲ್ಲೂಕಿನ ಮೂರ್ಕಣ್ಣು ಗುಡ್ಡ ಸೆಕ್ಷನ್-4 ಅಡಿ ಮೀಸಲು ಅರಣ್ಯ ವ್ಯಾಪ್ತಿಗೆ ಬರಲಿದೆ ಎಂದು ಇಲ್ಲಿನ ನಿವಾಸಿಗಳನ್ನು ಅರಣ್ಯ ಇಲಾಖೆ ಒಕ್ಕಲೆಬ್ಬಿಸಲು ಹುನ್ನಾರ ನಡೆಸುತ್ತಿದೆ ಎಂದು ಮೂರ್ಕಣ್ಣು ಗುಡ್ಡ ಹೋರಾಟ ಸಮಿತಿ ಸದಸ್ಯ ಬಿ.ಕೆ.ಸುರೇಶ್ ಆರೋಪಿಸಿದರು.

ಮೂರ್ಕಣ್ಣುಗುಡ್ಡ ವ್ಯಾಪ್ತಿಯಲ್ಲಿ 8 ಸಾವಿರ ಎಕರೆಗೂ ಹೆಚ್ಚಿನ ಅರಣ್ಯ ಭೂಮಿಯಿದ್ದು, ಇದರಲ್ಲಿ 1,500 ಎಕರೆ ತರಿ ಜಮೀನಿನಲ್ಲಿ ನೂರಾರು ಕುಟುಂಬಗಳು 200ಕ್ಕೂ ಹೆಚ್ಚು ವರ್ಷಗಳಿಂದ ಮನೆಕಟ್ಟಿಕೊಂಡು, ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಈ ಪ್ರದೇಶ ಸೆಕ್ಷನ್-4 ಅಡಿ ಮೀಸಲು ಅರಣ್ಯಕ್ಕೆ ಸೇರಿದೆ ಎಂದು 511 ಜನರಿಗೆ ನೋಟಿಸ್ ನೀಡುವ ಮೂಲಕ ನಮ್ಮನ್ನು ಭಯಪಡಿಸಲಾಗುತ್ತಿದೆ. ಅಲ್ಲದೇ ಗ್ರಾಮ ಪಂಚಾಯಿತಿಗಳಿಗೆ ನೋಟಿಸ್ ಅಂಟಿಸಿ ಈ ಭಾಗದ 8 ಗ್ರಾಮಗಳಿಗೆ ಮೂಲಸೌಕರ್ಯ ಕಲ್ಪಿಸದಂತೆ, ಮನೆ ಕಟ್ಟಿಕೊಳ್ಳಲು, ಯಾವುದೇ ಕೆಲಸಕ್ಕೆ ಅನುಮತಿ ನೀಡದಂತೆ ಸೂಚಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

1920ರಲ್ಲಿ ಮೈಸೂರು ಮಹಾರಾಜರು ಮೂರ್ಕಣ್ಣುಗುಡ್ಡವನ್ನು ಅರಣ್ಯೀಕರಣ ಮಾಡಲು ಸೂಕ್ತ ಎಂದು ನಿರ್ಧರಿಸಿ ಮೀಸಲು ಅರಣ್ಯವಾಗಿಸಲು ಕ್ರಮ ಕೈಗೊಂಡಿದ್ದರು. ಇದರ ಮುಂದುವರೆದ ಭಾಗವಾಗಿ 1924ರಲ್ಲಿ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಅರಣ್ಯ ಇಲಾಖೆ ಅಧಿಕಾರಿಯನ್ನು ಕಳುಹಿಸಿದ್ದರು. ಪರಿಶೀಲನೆ ನಡೆಸಿದ ಅಧಿಕಾರಿ, ಜನವಸತಿ, ಖುಷ್ಕಿ, ತರಿ ಜಮೀನು ಇದಾಗಿದ್ದು ಅರಣ್ಯಕ್ಕಿಂತ ಕೃಷಿ ಜಮೀನಿಗೆ ಉತ್ತಮ ಎಂದು ವರದಿ ನೀಡಿದ್ದರು. ಆದರೆ, ಪ್ರಸ್ತುತ ಅರಣ್ಯ ಇಲಾಖೆ ಅಧಿಕಾರಿಗಳು 1924ರ ವರದಿಯನ್ನು ಮರೆಮಾಚಿ, 1920 ರಲ್ಲಿ ಮಹಾರಾಜರು ಮಾಡಿದ್ದ ಆದೇಶ ಹಿಡಿದುಕೊಂಡು ನಮ್ಮನ್ನು ಬೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಅವರನ್ನು ಭೇಟಿ ಮಾಡಿ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಡಲಾಗಿದ್ದು, ಅವರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಈ ಬಗ್ಗೆ ಶಾಸಕ ಸಿಮೆಂಟ್ ಮಂಜು ಅವರು ಕೂಡ ಸರ್ಕಾರ ಗಮನ ಸೆಳೆದಿದ್ದಾರೆ. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ನಮ್ಮನ್ನು ಬೆದರಿಸುವುದನ್ನು ನಿಲ್ಲಿಸಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ, ಅರಣ್ಯ ಇಲಾಖೆ ಉಪಸಂರಕ್ಷಣಾಧಿಕಾರಿಗೆ ಮತ್ತೊಮ್ಮೆ ಮನವಿ ಸಲ್ಲಿಸುತ್ತೇವೆ. ನಮ್ಮ ಮನವಿಗೆ ಸರ್ಕಾರ ಮತ್ತು ಅರಣ್ಯ ಇಲಾಖೆ ಸ್ಪಂದಿಸದಿದ್ದರೆ ಸೆಕ್ಷನ್-4 ಅಡಿ ಸಮಸ್ಯೆಗೆ ಸಿಲುಕಿರುವ ಸಕಲೇಶಪುರ ತಾಲ್ಲೂಕಿನ ಅಗನಿ, ನಗಹಳ್ಳಿ, ಅಚ್ಚರಡಿ, ಜಂಬರಡಿ, ಕ್ಯಾಮನಹಳ್ಳಿ, ಮಂಜಮಹಳ್ಳಿ, ಕಾಡುಮನೆ ಗ್ರಾಮಸ್ಥರು ಚರ್ಚಿಸಿ ನ್ಯಾಯಾಲಯದ ಮೆಟ್ಟಿಲೇರುವುದು ನಮಗೆ ಅನಿವಾರ್ಯವಾಗಿದೆ ಎಂದು ತಿಳಿಸಿದರು.

ಅತಿವೃಷ್ಟಿ, ಕಾಡುಪ್ರಾಣಿಗಳ ಹಾವಳಿಯ ನಡುವೆಯೂ ಯಾರಿಗೂ ತೊಂದರೆ ನೀಡದೆ ಶ್ರಮವಹಿಸಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ನಮ್ಮಿಂದ ಪರಿಸರಕ್ಕೆ, ಕಾಡುಪ್ರಾಣಿಗಳಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗಿಲ್ಲ. ಹೀಗಿದ್ದರೂ ಅರಣ್ಯ ಇಲಾಖೆ ತೊಂದರೆ ನೀಡುತ್ತಿರುವುದು ಖಂಡನೀಯ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮೂರ್ಕಣ್ಣುಗುಡ್ಡ ಹೋರಾಟ ಸಮಿತಿ ತಮ್ಮಣ್ಣ, ನಾಗೇಶ್, ಮಂಜಣ್ಣ ಇದ್ದರು.