ತುಮಕೂರು: ಹಲವಾರು ವರ್ಷಗಳಿಂದಲೂ ಪೋಡಿ ದುರಸ್ತಿಗೊಳ್ಳದೆ ಬಾಕಿ ಉಳಿದುಕೊಂಡಿದ್ದ ಜಮೀನುಗಳನ್ನು ಕನಿಷ್ಠ ಮಂಜೂರಿ ದಾಖಲೆಗಳ ಪರಿಶೀಲನೆ ನಡೆಸಿ ಹೊಸ ಪಹಣಿ ಸೃಜಿಸುವ ಮೂಲಕ ರೈತರ ದರಖಾಸ್ತು ಮತ್ತು ಪೋಡಿ ಪ್ರಕರಣಗಳಿಗೆ ಶಾಶ್ವತ ಪರಿಹಾರ ದೊರಕಿಸಿಕೊಡಲು ಕಂದಾಯ ಇಲಾಖೆ ಮುಂದಾಗಿದೆ. ದರಖಾಸ್ತು ದುರಸ್ತಿ ಪೋಡಿ ಮಾರ್ಗಸೂಚಿ ನಿಯಮ ಸರಳೀಕರಣಗೊಳಿಸಿದ್ದು, ಜಿಲ್ಲೆಯ ರೈತರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಕಚೇರಿನಲ್ಲಿ ಮಂಗಳವಾರ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್ ಜಿಲ್ಲೆಯ ರೈತರಲ್ಲಿ ಮನವಿ ಮಾಡಿದ್ದಾರೆ. ಭೂ ಮಂಜೂರಿಯಂತೆ ಸರ್ಕಾರಿ ಸರ್ವೇ ನಂಬರ್ಗಳಿಂದ ಪ್ರತ್ಯೇಕಿಸಿ ಹಿಡುವಳಿ ಭೂಮಿಯನ್ನಾಗಿಸುವ ಪೋಡಿ ದುರಸ್ತಿಯ ಪ್ರಕ್ರಿಯೆಯಲ್ಲಿನ ಕಠಿಣ ನಿಯಮಗಳನ್ನು ಸರ್ಕಾರ ಸರಳೀಕರಣ ಮಾಡಿರುವ ಪರಿಣಾಮ ಸರ್ಕಾರಿ ನಂಬರ್ಗಳಲ್ಲಿನ ಮಂಜೂರಿ ರೈತಾಪಿ ವರ್ಗದವರಿಗೆ ಈ ನಿಯಮಗಳಿಂದ ಅನುಕೂಲವಾಗಲಿದೆ ಎಂದರು. ದರಖಾಸ್ತು ಮತ್ತು ಪೋಡಿ ಪ್ರಕರಣಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ದೃಷ್ಟಿಯಿಂದ ಸರ್ಕಾರ ನಮೂನೆ 1-5ನ್ನು ತಯಾರಿಸುವ ಪ್ರಕ್ರಿಯೆ ಸರಳೀಕರಿಸಿದ್ದು, ಕನಿಷ್ಠ 3 ಮಂಜೂರಿ ದಾಖಲೆಗಳು ಲಭ್ಯವಿದ್ದಲ್ಲಿ ಆಯಾ ತಾಲೂಕು ತಹಸೀಲ್ದಾರ್ ನೈಜತೆ ಪರಿಶೀಲಿಸಿ ಪೋಡಿಗೆ ಕ್ರಮವಹಿಸಲು ಆದೇಶ ನೀಡಲಿದ್ದಾರೆ. ನಮೂನೆ 1-5 ತಯಾರಿಸಲು ಹೊಸದಾಗಿ ತಂತ್ರಾಂಶವನ್ನೂ ಸಹ ಈಗಾಗಲೇ ಅಭಿವೃದ್ಧಿಪಡಿಸಲಾಗಿದೆ. ಒಂದು ಸರ್ವೇ ನಂಬರಿಗೆ ಸಂಬಂಧಿಸಿದ ಎಲ್ಲ ಮಂಜೂರಿ ದಾಖಲೆಗಳನ್ನು ಕ್ರೋಡಿಕರಿಸಿ ನಮೂನೆ 1-5ನ್ನು ತಂತ್ರಾಂಶದಲ್ಲಿ ದಾಖಲಿಸಿ, ಮಂಜೂರಿ ದಾಖಲೆಗಳನ್ನು ಸ್ಕ್ಯಾನ್ ಮಾಡಿ ತಂತ್ರಾಂಶದಲ್ಲಿ ಸಂರಕ್ಷಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಕಾಯೋರ್ನ್ಮುಖವಾಗಿದೆ. ದರಖಾಸ್ತು ಪೋಡಿ ಆಂದೋಲನದ ರೂಪದಲ್ಲಿ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಕನಿಷ್ಠ 100 ಮಂಜೂರಿದಾರರು ಸೇರಿ 1000 ಮಂಜೂರಿದಾರರಿಗೆ 2025ರ ಜನವರಿ 26ರೊಳಗಾಗಿ ನಮೂನೆ 1 ರಿಂದ 5ನ್ನು ಭರ್ತಿ ಮಾಡಿ ಪೋಡಿ ದುರಸ್ತಿ ಕಾರ್ಯ ಪೂರ್ಣಗೊಳಿಸಬೇಕು ಎಂದು ಆಯಾ ತಾಲೂಕಿನ ತಹಸೀಲ್ದಾರ್ ಮತ್ತು ಭೂದಾಖಲೆಗಳ ಸಹಾಯಕ ನಿರ್ದೇಶಕರಿಗೆ ಜಿಲ್ಲಾಡಳಿತ ಸೂಚಿಸಿದೆ.
ಜಿಲ್ಲೆಯ ಎಲ್ಲ ತಾಲೂಕು ಕಚೇರಿಯ ಅಭಿಲೇಖಾಲಯದಲ್ಲಿರುವ ಕಂದಾಯ ದಾಖಲೆಗಳನ್ನು ಗಣಕೀಕರಣ ಮಾಡಲು ಉದ್ದೇಶಿಸಲಾಗಿದ್ದು, ಗಣಕೀಕರಣ ಕಾರ್ಯಕ್ಕಾಗಿ ಆಸಕ್ತ ಅಧಿಕೃತ ಸಂಸ್ಥೆಗಳಿಂದ ಅಲ್ಪಾವಧಿ ಟೆಂಡರ್ ಆಹ್ವಾನಿಸಲಾಗಿದೆ. ದಾಖಲೆಗಳನ್ನು ಗಣಕೀಕರಣ ಮಾಡಲು ಕಂದಾಯ ಇಲಾಖೆ ಭೂಸುರಕ್ಷಾ ಯೋಜನೆಯಡಿ ಹೊಸ ತಂತ್ರಾಂಶ ಅಭಿವೃದ್ಧಿಪಡಿಸಿದ್ದು, 2025ರ ಜನವರಿ 1 ರಿಂದ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಲಾಗುವುದು. ಮೊದಲು ಎ ವರ್ಗದ ಕಡತ, ವಹಿಗಳ ಗಣಕೀಕರಣ ನಂತರದಲ್ಲಿ ಬಿ ವರ್ಗದ ಕಡತ, ವಹಿಗಳನ್ನು ಗಣಕೀಕರಣ ಮಾಡಲಾಗುತ್ತಿದೆ. ಕಂದಾಯ ದಾಖಲೆಗಳನ್ನು ಗಣಕೀಕರಣಗೊಳಿಸಲು ಜಿಲ್ಲೆಯ ಎಲ್ಲ್ಲ(ಪೈಲೆಟ್ ತಾಲೂಕು ಶಿರಾ ಹೊರತುಪಡಿಸಿ) ತಾಲೂಕು ಕಚೇರಿಗಳಿಗೆ ತಲಾ 6 ಕಂಪ್ಯೂಟರ್ ಆಪರೇಟರ್ ಒದಗಿಸಲು ಈ ಟೆಂಡರ್ ಕರೆಯಲಾಗಿದೆ. ಕಂಪ್ಯೂಟರ್ ಆಪರೇಟರ್ಗಳನ್ನು ಒದಗಿಸಲಿಚ್ಛಿಸುವ ಅಧಿಕೃತ ಸಂಸ್ಥೆಗಳು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ಮಾಹಿತಿಗೆ ದೂ.0816- 2278718 ಸಂಪರ್ಕಿಸಿ.
ಜಿಲ್ಲೆಯಲ್ಲಿ ಈಗಾಗಲೇ ತಂತ್ರಾಂಶದಲ್ಲಿ ಭೂ ಮಂಜೂರಿಯಾಗಿರುವ ಸರ್ಕಾರಿ ಸರ್ವೇ ನಂಬರ್ ಡಾಟಾ ಎಂಟ್ರಿ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಏಕ ಕಾಲದಲ್ಲಿ ಅಳತೆ ದುರಸ್ತಿ ಪ್ರಕ್ರಿಯೆಯನ್ನು ಸಹ ಕೈಗೊಂಡು ಮಂಜೂರಿದಾರರಿಗೆ ಹೊಸ ಪಹಣಿ ದಾಖಲೆ ಸೃಜಿಸುವ ಬಗ್ಗೆ ಕಾರ್ಯ ಯೋಜನೆ ರೂಪಿಸಲಾಗಿದೆ.| ಶುಭಕಲ್ಯಾಣ್ ಜಿಲ್ಲಾಧಿಕಾರಿ