ಜಿಲ್ಲೆ

ಮೂರುಸಾವಿರ ಮಠದ ಆವರಣ ಸೀಲ್​ಡೌನ್

ಹುಬ್ಬಳ್ಳಿ: ನಗರದ ಮೂರುಸಾವಿರ ಮಠದ ಆವರಣಕ್ಕೆ ಹೊಂದಿಕೊಂಡ ಮನೆಯೊಂದರ 36 ವರ್ಷದ ವ್ಯಕ್ತಿಗೆ ಕರೊನಾ ಸೋಂಕು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಆವರಣಕ್ಕೆ ಹೊಂದಿಕೊಂಡಿರುವ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಲಾಗಿದೆ. ಅಲ್ಲದೆ, ಮೂರುಸಾವಿರ ಮಠಕ್ಕೆ ಭಕ್ತರು ತೆರಳುವಂತೆಯೂ ಇಲ್ಲ.

ಮಹಾದ್ವಾರದಿಂದ ಒಳ ಪ್ರವೇಶಿಸುತ್ತಿದ್ದಂತೆ ಎರಡೂ ಬದಿಯಲ್ಲಿ ಅಂಗಡಿಗಳಿವೆ. ಈಗಾಗಲೇ ಪೊಲೀಸರು ಮತ್ತು ಪಾಲಿಕೆ ಅಧಿಕಾರಿಗಳು ಅಂಗಡಿಗಳ ಬಾಗಿಲು ತೆರೆಯದಂತೆ ಮಾಲೀಕರಿಗೆ ಸೂಚಿಸಿದ್ದಾರೆ. ದೇವಸ್ಥಾನಕ್ಕೆ ಪ್ರವೇಶಿಸುವ ಇನ್ನೊಂದು ದ್ವಾರದ ಬಳಿ ಬ್ಯಾರಿಕೇಡ್ ಹಾಕಿ ಸೀಲ್​ಡೌನ್ ಮಾಡಲಾಗಿದೆ. ಹಾಗಾಗಿ ಸಾರ್ವಜನಿಕರು ಓಡಾಡದಂತೆ ಎಚ್ಚರ ವಹಿಸಲಾಗಿದೆ. ನಿತ್ಯ ಈ ಮಠಕ್ಕೆ ಭಕ್ತರು ಬಂದು ಶ್ರೀಗಳ ಗದ್ದುಗೆ ದರ್ಶನ ಪಡೆಯುತ್ತಿದ್ದರು. ಈಗ ಸೀಲ್​ಡೌನ್ ಮಾಡಲಾಗಿದೆ. ಇದರಿಂದ ಭಕ್ತರು ಶ್ರೀಮಠಕ್ಕೆ ಹೋಗದಂತಾಗಿದೆ.

4 ಕರೊನಾ ಪ್ರಕರಣ ಪತ್ತೆ

ಧಾರವಾಡ: ಜಿಲ್ಲೆಯಲ್ಲಿ ಮಂಗಳವಾರ 4 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

ಬೆಂಗಳೂರಿನಿಂದ ಆಗಮಿಸಿದ ಇಲ್ಲಿನ ಮಿಚಗನ್ ಕಾಂಪೌಂಡ್​ನ ಲೋಬೋ ಅವೆಂಜಾ ಅಪಾರ್ಟ್​ವೆುಂಟ್​ನ 55 ವರ್ಷದ ಪುರುಷ, ನೆಗಡಿ, ಕೆಮ್ಮು, ತೀವ್ರ ಜ್ವರದಿಂದ ಬಳಲುತ್ತಿದ್ದ ಹುಬ್ಬಳ್ಳಿ ಅಂಚಟಗೇರಿಯ 57 ವರ್ಷದ ಪುರುಷ, ಹುಬ್ಬಳ್ಳಿ ಮೂರುಸಾವಿರಮಠ ಬಳಿಯ 36 ವರ್ಷದ ಪುರುಷ ಹಾಗೂ ಜೂ. 20ರಂದು ಸೋಂಕು ದೃಢಪಟ್ಟ ಮೊರಬ ಗ್ರಾಮದ 48 ವರ್ಷದ ಪುರುಷನ ಸಂಪರ್ಕ ಹೊಂದಿದ್ದ ಅದೇ ಗ್ರಾಮದ ಹಳ್ಳಿಗೇರಿ ಓಣಿಯ 43 ವರ್ಷದ ಪುರುಷನಿಗೆ ಸೋಂಕು ತಗುಲಿದೆ.

14 ಜನ ಬಿಡುಗಡೆ:

ಕೋವಿಡ್​ನಿಂದ ಗುಣವಾದ 14 ಜನರು ಜೂ. 22ರಂದು ಕಿಮ್್ಸ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 21, 24, 29, 34, 35, 62 ವರ್ಷದ ಮಹಿಳೆಯರು, 2 ಮತ್ತು 4 ವರ್ಷದ ಬಾಲಕ, 10 ಮತ್ತು 11 ವರ್ಷದ ಬಾಲಕಿ, 49, 50, 27, 72 ವರ್ಷದ ಪುರುಷರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ತಿಳಿಸಿದ್ದಾರೆ .

ಸುಳ್ಳು ಸುದ್ದಿ ಹರಡಿದರೆ ಕಠಿಣ ಕ್ರಮ

ಧಾರವಾಡ: ಕರೊನಾಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಹಾಗೂ ಮೌಖಿಕವಾಗಿ ಕೆಲವರು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ಸಾರ್ವಜನಿಕರು ಇಂತಹ ವದಂತಿಗಳಿಗೆ ಕಿವಿಗೊಡಬಾರದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಮನವಿ ಮಾಡಿದ್ದಾರೆ.

ಜಿಲ್ಲೆಯಲ್ಲಿ ಈಗಾಗಲೇ 90 ಜನ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಮೂವರು ಮಾತ್ರ ಮೃತಪಟ್ಟಿದ್ದಾರೆ. ಕಿಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲರ ಆರೋಗ್ಯ ಸ್ಥಿರವಾಗಿದ್ದು, ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ಆದಾಗ್ಯೂ ಕೆಲವರು ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಇಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್​ಗೆ ಸಂಬಂಧಿಸಿದ ಅಧಿಕೃತ ಮಾಹಿತಿ ಜಿಲ್ಲಾಡಳಿತ, ಸಚಿವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾಧ್ಯಮ ಪ್ರಕಟಣೆ ಮೂಲಕ ತಿಳಿಸಲಾಗುತ್ತದೆ. ಅಪ ಪ್ರಚಾರ ಮಾಡುವವರ ವಿರುದ್ಧ ಕಾನೂನು ಪ್ರಕಾರ ಶಿಕ್ಷೆ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.