ಹಾಸನ: ಜಿಲ್ಲೆಯಲ್ಲಿ ಕಳೆದ 3 ವರ್ಷದಲ್ಲಿ ಅಪ್ರಾಪ್ತರ ಮೇಲೆ ನಡೆದ ಲೈಂಗಿಕ ದೌರ್ಜನ್ಯ, ಅತ್ಯಾಚಾರಕ್ಕೆ ಸಂಬಂಧಿಸಿದಂತೆ 14 ಪ್ರಕರಣಗಳಲ್ಲಿ ವಿಶೇಷ ನ್ಯಾಯಾಲಯವು ಅಪರಾಧಿಗಳಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ ಎಂದು ಪೋಕ್ಸೋ ನ್ಯಾಯಾಲಯದ ವಿಶೇಷ ಅಭಿಯೋಜಕ ಶ್ರೀನಿವಾಸಗೌಡ ಹೇಳಿದರು.
ಸುದ್ದಿಗಾರರೊಂದಿಗೆ ಇತ್ತೀಚೆಗೆ ಮಾತನಾಡಿ, ಜಿಲ್ಲಾ ಪೋಕ್ಸೋ ವಿಶೇಷ ನ್ಯಾಯಾಲಯದಲ್ಲಿ 2022 ಜೂನ್ 22 ರಿಂದ 2025 ಆಗಸ್ಟ್‌ವರೆಗೂ ಒಟ್ಟು 14 ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗಿದೆ. ಬಾಲಕಿಯರ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗಳಿಗೆ ವಿಶೇಷ ನ್ಯಾಯಾಲಯದಲ್ಲಿ ಪೋಕ್ಸೋ ಕಾಯ್ದೆಯಡಿ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.
ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣಗಳ ಜತೆಗೆ ಬಾಲ್ಯ ವಿವಾಹ ಕೂಡ ನಡೆಯುತ್ತಿದೆ. ಈಗಾಗಲೇ ವಿಶೇಷ ನ್ಯಾಯಾಲಯದಲ್ಲಿ ನ್ಯಾಯಾಧೀಶರು ಅತ್ಯಾಚಾರಗಳಿಗೆ ಶಿಕ್ಷೆ ನೀಡುವುದರ ಮೂಲಕ ಎಚ್ಚರಿಕೆ ಕೊಟ್ಟಿದ್ದಾರೆ. ಬಾಲಕಿ ಮೇಲೆ ಅತ್ಯಾಚಾರ ನಡೆದಿರುವ ಶಿಕ್ಷೆಯಲ್ಲಿ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗೆ 30 ವರ್ಷಗಳವರೆಗೂ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ ಎಂದರು.
ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ತಪ್ಪಿಸಲೆಂದೇ ಸರ್ಕಾರ ಮಕ್ಕಳ ರಕ್ಷಣಾ ಅಧಿಕಾರಿಗಳು, ಸಹಾಯವಾಣಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತೆರೆದಿದೆ. ಹೀಗಾಗಿ ಮಕ್ಕಳ ಮೇಲೆ ದೌರ್ಜನ್ಯ ನಡೆದಾಗ ತಕ್ಷಣ ತಿಳಿಸುವ ಕೆಲಸ ಮಾಡಬೇಕು. ಸಂಬಂಧಪಟ್ಟ ಅಧಿಕಾರಿಗಳು ಮಕ್ಕಳನ್ನು ರಕ್ಷಣೆ ಮಾಡಿ, ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ ನಂತರ ನ್ಯಾಯಾಲಯದಲ್ಲಿ ಸಾಕ್ಷಿ, ಆಧಾರದ ಮೂಲಕ ಶಿಕ್ಷೆ ಮತ್ತು ದಂಡ ವಿಧಿಸುವ ಕೆಲಸ ಮಾಡಲಾಗುವುದು. ಅಪ್ರಾಪ್ತರ ಮೇಲೆ ಯುವಕರಿಂದ ವೃದ್ಧರವರೆಗೂ ದೌರ್ಜನ್ಯ ನಡೆಸುವ ಪ್ರಕರಣಗಳು ದಾಖಲಾಗಿದೆ. ಶಾಲಾ ಶಿಕ್ಷಕರು ವಿದ್ಯಾರ್ಥಿಗಳ ಮೇಲೆ ನಡೆಸಿರುವ ದೌರ್ಜನ್ಯ ಪ್ರಕರಣಗಳೂ ಇವೆ. ಆರೋಪಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯದಲ್ಲಿ ಸೂಕ್ತ ಸಾಕ್ಷಿಯನ್ನು ಒದಗಿಸಿದರೆ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಲಿದೆ ಎಂದು ಹೇಳಿದರು.
ಮಕ್ಕಳ ಸ್ನೇಹಿ ನ್ಯಾಯಾಲಯ: ಮಕ್ಕಳಿಗೆ ನ್ಯಾಯಾಲಯದ ವಾತಾವರಣದಲ್ಲಿ ಭಯ ಕಡಿಮೆ ಮಾಡುವ ಉದ್ದೇಶದಿಂದ ಮಕ್ಕಳ ಸ್ನೇಹಿ ನ್ಯಾಯಾಲಯ ಎಂಬ ಹೆಸರಿನಲ್ಲಿ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಪೋಕ್ಸೋ ಸಂತ್ರಸ್ತರಿಗೆ ವಿಶ್ರಾಂತಿ ಕೊಠಡಿ, ಮಕ್ಕಳಿಗಾಗಿ ಆಟಿಕೆಗಳಿರುವ ಪ್ರತ್ಯೇಕ ಕೊಠಡಿ ನಿರ್ಮಿಸಲಾಗಿದೆ. ಜಿಲ್ಲೆಯಲ್ಲಿ ವಿಶೇಷ ಪೋಕ್ಸೋ ನ್ಯಾಯಾಲಯವು ಕಳೆದ 3 ವರ್ಷಗಳಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಕಾನೂನು ಪ್ರಕಾರ ಗಂಭೀರ ಶಿಕ್ಷೆ ವಿಧಿಸುವ ಮೂಲಕ ಸಮಾಜಕ್ಕೆ ಎಚ್ಚರಿಕೆಯ ಸಂದೇಶ ನೀಡುತ್ತಿದೆ ಎಂದು ಹೇಳಿದರು.