ಜಿಲ್ಲೆ

ಮೂರು ಮದುವೆ, ಮೂರನೆಯವಳಿಂದ ಕೊಲೆ

ಬೆಳಗಾವಿ: ತಾಲೂಕಿನ ಬೆಳಗುಂದಿ ಗ್ರಾಮದಲ್ಲಿ ಮೂವರು ಮಹಿಳೆಯರನ್ನು ಮದುವೆ ಆಗಿ, ಮೂರನೇ ಪತ್ನಿಯಿಂದಲೇ ಹತ್ಯೆಗೀಡಾಗಿದ್ದ ವ್ಯಕ್ತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶುಕ್ರವಾರ ಮೂವರನ್ನು ಬಂಧಿಸಿದ್ದಾರೆ. ತಾಲೂಕಿನ ಬಸೂರ್ತೆ ಗ್ರಾಮದ ನಿವಾಸಿ ಗಜಾನನ ನಾಯ್ಕ (51) ಕೊಲೆಯಾದ ವ್ಯಕ್ತಿ. ಪತ್ನಿ ವಿದ್ಯಾ ಪಾಟೀಲ, ಆಕೆಯ ಪುತ್ರ ಹೃತಿಕ್ ಹಾಗೂ ಸ್ನೇಹಿತ ಪರಶುರಾಮ ಗೋಂಧಳಿ ಬಂಧಿತರು.

ಪ್ರಕರಣದ ವಿವರ: ಗಜಾನನ ಈ ಹಿಂದೆ ಎರಡು ಮದುವೆಯಾಗಿದ್ದ. ಆದರೆ, ಇಬ್ಬರೂ ಪತ್ನಿಯರು ಆತನನನ್ನು ಬಿಟ್ಟು ಹೋಗಿದ್ದರು. ಬಳಿಕ ಎರಡನೇ ಪತ್ನಿಯ ಮಗನೊಂದಿಗೆ ಬೆಳಗುಂದಿಯಲ್ಲಿ ಬೇಕರಿ ನಡೆಸುತ್ತ ಜೀವನ ಸಾಗಿಸುತ್ತಿದ್ದ. ಬೆಳಗುಂದಿ ಗ್ರಾಮದ ನಿವಾಸಿ, ವಿಧವೆ ವಿದ್ಯಾ ಪಾಟೀಲ ಜತೆಗೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದ. ಆಕೆ ತನ್ನ ಇಬ್ಬರು ಮಕ್ಕಳ ಜತೆ ಗಜಾನನ ಜತೆಗೆ ವಾಸವಿದ್ದಳು. ಅಲ್ಲದೆ, ಗಜಾನನ ಸಾಲ ಮಾಡಿ ವಿದ್ಯಾಳಿಗೆ ಮನೆ ಕಟ್ಟಿಸಿಕೊಟ್ಟಿದ್ದ. 3 ವರ್ಷದ ಹಿಂದೆ ವ್ಯವಹಾರದಲ್ಲಿ ನಷ್ಟವಾಗಿ ಬೇಕರಿ ಬಂದ್ ಆಗಿತ್ತು. ಆರ್ಥಿಕ ನಷ್ಟದ ಹಿನ್ನೆಲೆಯಲ್ಲಿ ಮನೆ ಮಾರಾಟ ಮಾಡಲು ವಿದ್ಯಾ ಪಾಟೀಲಗೆ ಗಜಾನನ ಒತ್ತಾಯಿಸಿದ್ದ. ಮನೆ ಮಾರಾಟ ಮಾಡದಿದ್ದರೆ ತನ್ನ ಜತೆಗೆ ಮದುವೆಯಾದ ಬಗ್ಗೆ ಎಲ್ಲರಿಗೂ ತಿಳಿಸುವುದಾಗಿ ಬೆದರಿಕೆ ಹಾಕಿದ್ದ. ಇದರಿಂದ ಕುಪಿತಗೊಂಡ ವಿದ್ಯಾ, ಗಜಾನನ ನಾಯ್ಕನ ಹತ್ಯೆಗೆ ಸಂಚು ರೂಪಿಸಿದ್ದಳು.

ಫೆ. 26ರಂದು ರಾತ್ರಿ ಗಜಾನನನಿಗೆ ಕರೆ ಮಾಡಿದ ವಿದ್ಯಾ, ‘ಮನೆಗೆ ಬರುತ್ತೇನೆ ನಿನ್ನ ಮಗನನ್ನು ಊರಿಗೆ ಕಳುಹಿಸು’ ಎಂದು ತಿಳಿಸಿದ್ದಳು. ಅದರಂತೆ ಗಜಾನನ ತನ್ನ ಮಗನನ್ನು ಬಸೂರ್ತೆ ಗ್ರಾಮಕ್ಕೆ ಬಿಟ್ಟು ಬಂದಿದ್ದನು. ಅಂದು ರಾತ್ರಿ ಗಜಾನನ ನಾಯ್ಕನ ಮನೆಗೆ ಬಂದಿದ್ದ ವಿದ್ಯಾ ಪಾಟೀಲ, ಆತನಿಗೆ ಕಂಠಪೂರ್ತಿ ಮದ್ಯ ಕುಡಿಸಿದ್ದಾಳೆ. ಬಳಿಕ ತನ್ನ ಪುತ್ರ ಹೃತಿಕ್ ಹಾಗೂ ಆತನ ಸ್ನೇಹಿತ ಪರಶುರಾಮ ಗೋಂಧಳಿ ಅವರನ್ನು ಕರೆಯಿಸಿ, ಮಾರಕಾಸ್ತ್ರದಿಂದ ಗಜಾನನ ನಾಯ್ಕನ ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದರು. ಮರುದಿನ ಗಜಾನನ ಪುತ್ರ ಅವಧೂತ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ವಿದ್ಯಾ ಪಾಟೀಲ ಮೇಲೆ ಅನುಮಾನ ವ್ಯಕ್ತಪಡಿಸಿದ್ದ ಅವಧೂತ, ಬಳಿಕ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದನು.