ಬೆಂ.ಗ್ರಾಮಾಂತರ/ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಎರಡೂ ಜಿಲ್ಲೆಗಳ ವ್ಯಾಪ್ತಿಯ ಮೇಲ್ಮನೆ ಚುನಾವಣೆ ಅಖಾಡ ರಂಗೇರಿದೆ. ಮಂಗಳವಾರ ನಾಮಪತ್ರ ಸಲ್ಲಿಕೆ ಕಡೇ ದಿನವಾಗಿದ್ದು, ಜಿಲ್ಲಾಧಿಕಾರಿ ಕಚೇರಿಯಲ್ಲಿ ಕದನ ಕುತೂಹಲ ದೃಶ್ಯ ಕಂಡುಬಂತು.
ಬಿಜೆಪಿಯಿಂದ ಬಿ.ಸಿ.ನಾರಾಯಣಸ್ವಾಮಿ, ಕಾಂಗ್ರೆಸ್‌ನಿಂದ ಎಸ್.ರವಿ ಹಾಗೂ ಜೆಡಿಎಸ್‌ನಿಂದ ಎಚ್.ಎಂ.ರಮೇಶ್‌ಗೌಡ ನಾಮಪತ್ರ ಸಲ್ಲಿಸುವ ಮೂಲಕ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಕಾಂಗ್ರೆಸ್‌ನ ಎಸ್.ರವಿ 1 ನಾಮಪತ್ರ, ಜೆಡಿಎಸ್‌ನ ಎಚ್.ಎಂ. ರಮೇಶ್‌ಗೌಡ 4 ಹಾಗೂ ಬಿಜೆಪಿ ಬಿ.ಸಿ.ನಾರಾಯಣಸ್ವಾಮಿ 2 ನಾಮಪತ್ರ ಸೇರಿ 7 ನಾಮಪತ್ರ ಸಲ್ಲಿಕೆಯಾಗಿವೆ.
ನ.24ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.26 ನಾಮಪತ್ರ ಹಿಂತೆಗೆದುಕೊಳ್ಳಲು ಕಡೇ ದಿನವಾಗಿದೆ. ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿ ಅಭ್ಯರ್ಥಿ ಜತೆಗೆ ರಾಮನಗರ ಹಾಗೂ ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವರು ರೊಂದಿಗೆ ಬಿಜೆಪಿ ದಂಡೇ ಆಗಮಿಸಿದ್ದರೆ, ಜೆಡಿಎಸ್‌ಅಭ್ಯರ್ಥಿ ಪರವಾಗಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ನೆಲಮಂಗಲ ಶಾಸಕ ಶ್ರೀನಿವಾಸಮೂರ್ತಿ ಮತ್ತಿತರ ಮುಖಂಡರ ಸೇನೆಯೇ ನೆರೆದಿತ್ತು. ಅಭ್ಯರ್ಥಿಗಳ ಪರವಾಗಿ ಜಯೋಷ ಮೊಳಗುವುದರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಅಕ್ಷರಶಃ ರಾಜಕೀಯ ಸೆಣಸಾಟದ ಕಣದಂತೆ ಕಂಡುಬಂತು.
ಮೂವರಿಗೂ ಪ್ರತಿಷ್ಠೆ ಕಣ: ಮೇಲ್ಮನೆ ಚುನಾವಣೆಗೆ ಅಭ್ಯರ್ಥಿ ಆಯ್ಕೆ ವಿಚಾರಕ್ಕೆ ರಾಮನಗರ ಕೇಂದ್ರವಾಗಿದ್ದು, ಕಾಂಗ್ರೆಸ್, ಜೆಡಿಎಸ್ ರಾಜ್ಯಮುಖಂಡರ ಪ್ರತಿಷ್ಠೆಯ ಕಣಗಳಾಗಿವೆೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರಬಲ ಅಭ್ಯರ್ಥಿಗಳ ಮೂಲಕ ಚುನಾವಣೆ ಎದುರಿಸಲು ಸಿದ್ಧರಾಗಿದ್ದಾರೆ. ಕಮಲ ಪಾಳಯದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ರಾಮನಗರ ಜಿಲ್ಲಾ ಉಸ್ತುವಾರಿಗಳಾದ ಎಂ.ಟಿ.ಬಿ.ನಾಗರಾಜ್ ಹಾಗೂ ಡಾ.ಅಶ್ವತ್ಥನಾರಾಯಣ್ ಅವರು ಬಿಜೆಪಿ ಅಭ್ಯರ್ಥಿ ಗೆಲುವಿಗೆ ರಣೋತ್ಸಾಹ ಸೃಷ್ಟಿಸಿದ್ದಾರೆ.
ಚುನಾವಣೆ ಇತಿಹಾಸ: 2015ರಲ್ಲಿ ನಡೆದಿದ್ದ ಎಂಎಲ್‌ಸಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್.ರವಿ, ಜೆಡಿಎಸ್ ಅಭ್ಯರ್ಥಿ ಇ.ಕೃಷ್ಣಪ್ಪ ವಿರುದ್ಧ 378 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಹೀಗಾಗಿ, ಈ ಬಾರಿ ಇವೆರಡು ಪಕ್ಷಗಳ ನಡುವೆ ಪೈಪೋಟಿ ಕಾಣುತ್ತಿದ್ದು, ಇದರ ನಡುವೆ ಬಿಜೆಪಿಯೂ ಬಲಪ್ರದರ್ಶನಕ್ಕೆ ಮುಂದಾಗಿದೆ.
ಮತಗಳ ಲೆಕ್ಕಾಚಾರ: ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಿಂದ ದೊಡ್ಡಬಳ್ಳಾಪುರ, ನೆಲಮಂಗಲ, ಹೊಸಕೋಟೆ, ದೇವನಹಳ್ಳಿ, ಚನ್ನಪಟ್ಟಣ, ಮಾಗಡಿ, ರಾಮನಗರ ಸೇರಿ 8 ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ ಪುರಸಭೆ, ನಗರಸಭೆಗಳ ಸಂಖ್ಯೆ 10 ಇದ್ದು, 228 ಗ್ರಾಪಂಗಳಿವೆ. ಈ ಬಾರಿ ತಾಪಂ, ಜಿಪಂ ಸದಸ್ಯ ಬಲವಿಲ್ಲದ ಕಾರಣ ಒಂದಷ್ಟು ಮತಗಳು ಕಡಿತಗೊಳ್ಳಲಿವೆ.
ಮೂರು ಪಕ್ಷಗಳ ಪ್ರಭಾವ: ಪ್ರಸ್ತುತ 8 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪ್ರಾಬಲ್ಯವಿದ್ದು, ಬಿಜೆಪಿಯೂ ಸಹ ಸಮರ್ಥ ಎದುರಾಳಿಯಾಗಿದೆ. ಸ್ಥಳೀಯ ಸಂಸ್ಥೆಗಳ ಸದಸ್ಯರನ್ನು ಸೆಳೆಯುವಲ್ಲಿಯೂ ಬಿಜೆಪಿ ಮುಂದಿದೆ. ಡಿಕೆಶಿ ಮತ್ತು ಎಚ್‌ಡಿಕೆ ಪ್ರಭಾವದ ನಡುವೆ ಎಂಟಿಬಿ ನಾಗರಾಜ್, ಅಶ್ವತ್ಥ್‌ನಾರಾಯಣ ಅಲೆಯೂ ಜೋರಾಗಿಯೇ ಇದೆ.
ಮೇಲ್ಮನೆಗೆ ಬಿಜೆಪಿ ಗಾದಿ ಖಚಿತ: ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಎರಡೂ ಜಿಲ್ಲೆಗಳ ವ್ಯಾಪ್ತಿಯಲ್ಲಿ ನಡೆಯಲಿರುವ ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಸಿ.ನಾರಾಯಣಸ್ವಾಮಿ ಗೆಲುವು ಖಚಿತ ಎಂದು ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ವಿಶ್ವಾಸ ವ್ಯಕ್ತಪಡಿಸಿದರು.
ಮಂಗಳವಾರ ದೇವನಹಳ್ಳಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಬಾರಿ ಎರಡೂ ಜಿಲ್ಲೆಯಲ್ಲಿ ಬದಲಾವಣೆ ಬಯಸಲಾಗುತ್ತಿದೆ. ಆದ್ದರಿಂದ ಬಿಜೆಪಿ ಗೆಲುವು ನಿಶ್ಚಿತ ಎಂದು ಭವಿಷ್ಯ ನುಡಿದರು. ಇದು ಎರಡೂ ಜಿಲ್ಲೆಗಳ ಸ್ಥಳೀಯ ಚುನಾವಣೆಯಾಗಿದ್ದು, ಬಿಜೆಪಿ ಅಭ್ಯರ್ಥಿ ಗೆಲುವಿಗೆ ಎರಡೂ ಜಿಲ್ಲೆಯ ಬಿಜೆಪಿ ಮುಖಂಡರು ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದರು.
ಸಚಿವ ಎಂಟಿಬಿ ನಾಗರಾಜ್ ನಾಯಕತ್ವದಲ್ಲಿ ಗ್ರಾಮಾಂತರ ಜಿಲ್ಲೆಯ ಚುನಾವಣೆ ಎದುರಿಸಲಿದ್ದೇವೆ. ಹಾಗೆಯೇ ಸ್ಥಳೀಯ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಬೆಂಬಲದಿಂದ ಈ ಬಾರಿ ಅಷ್ಟೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧ್ಯವಾಗಲಿದೆ. ಎರಡೂ ಜಿಲ್ಲೆಗಳಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯ ನಡೆಸುವ ಸನ್ನಿವೇಶವಿರುವುದರಿಂದ ಜನರೂ ಬದಲಾವಣೆ ಬಯಸುತ್ತಿರುವುದರಿಂದ ಸಹಜವಾಗಿ ಬಿಜೆಪಿ ಪರ ಒಲವು ಹೆಚ್ಚಿದೆ. ಅಶ್ವತ್ಥನಾರಾಯಣ, ಸಚಿವ ಪಕ್ಷದ ರಾಜ್ಯ ಮತ್ತು ಸ್ಥಳೀಯ ಮುಖಂಡರ ಬೆಂಬಲವಿದೆ. ಈ ಬಾರಿಯ ಮೇಲ್ಮನೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸಹಜವಾಗಿ ಬಿಜೆಪಿ ಪ್ರಬಲ ಎದುರಾಳಿಯಾಗಲಿದೆ ಎನ್ನಬಹುದು, ಜೆಡಿಎಸ್‌ನಿಂದ ಅಂಥ ಸ್ಪರ್ಧೆ ಏರ್ಪಡುವ ಸನ್ನಿವೇಶವಿಲ್ಲ. ಕಳೆದ ಬಾರಿಯ ಗೆಲುವಿಗೆ ಹರಸಿದ್ದಂತೆ ಈ ಬಾರಿಯೂ ಸ್ಥಳೀಯ ಸಂಸ್ಥೆಗಳಿಂದ ಸಂಪೂರ್ಣ ಬೆಂಬಲ ವ್ಯಕ್ತವಾಗುವ ವಿಶ್ವಾಸವಿದೆ. ಎಸ್.ರವಿ, ಕಾಂಗ್ರೆಸ್ ಅಭ್ಯರ್ಥಿ