ಜಿಲ್ಲೆ

ಮೂರು ನಿಮಿಷದಲ್ಲಿ ಹಾಸನ ನಗರ ಸಭೆಯ ಬಜೆಟ್ ಮಂಡನೆ, ಅನುಮೋದನೆ

ಹಾಸನ: ಹಾಸನ ನಗರಸಭೆಯ 2024 -25ನೇ ಸಾಲಿನ ಆಯ-ವ್ಯಯ ಮಂಡನೆಯನ್ನು ನಗರಸಭೆ ಕಾರ್ಯಾಲಯದಲ್ಲಿ ಕೇವಲ ಮೂರು ನಿಮಿಷದಲ್ಲಿ ಮಂಡಿಸುವ ಮೂಲಕ ತರಾತುರಿಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು.
ನಗರಸಭೆಯ ಕುವೆಂಪು ಸಭಾಂಗಣದಲ್ಲಿ ಶನಿವಾರ ನಗರಸಭೆಯ ಆಡಳಿತಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಯುಕ್ತ ಯೋಗಾನಂದ ಅವರು ಬಜೆಟ್ ಪುಸ್ತಕವನ್ನು ಓದಲು ಆರಂಭಿಸಿದರು. ಆಗ ಜಿಲ್ಲಾಧಿಕಾರಿ 3 ಗಂಟೆಯ ನಂತರ ನೀತಿ ಸಂಹಿತೆ ಜಾರಿಯಾಗುತ್ತದೆ. ದಯವಿಟ್ಟು ಎಲ್ಲರೂ ಸಹಕರಿಸಿ ಎಂದು ಮನವಿ ಮಾಡಿಕೊಂಡರು. ಬಜೆಟ್ ಮಂಡನೆ ಮಾಡುವ ಸಂದರ್ಭದಲ್ಲಿ ಕೆಲವು ಸದಸ್ಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ‘ಇದು ಕೇವಲ ಮಂಡನೆ ಆಗುತ್ತದೆ. ನಾವೆಲ್ಲರೂ ಕೂಡ ಸರ್ವಾನುಮತದಿಂದ ಅನುಮೋದಿಸುತ್ತೇವೆ. ಆದರೆ ಸರಿಯಾಗಿ ಅನುಷ್ಠಾನವಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಜೆಟ್ ಪುಸ್ತಕವನ್ನು ಓದುತ್ತಿದ್ದ ಸಂದರ್ಭದಲ್ಲಿ ಎಲ್ಲಾ ಸದಸ್ಯರು ಪುಸ್ತಕ ನಮ್ಮ ಕೈಯಲ್ಲೇ ಇದೆ. ಕೊನೆ ಪೇಜ್ ಓದಿ. ಇನ್ನು ಕೇವಲ ಒಂದು ನಿಮಿಷ ಬಾಕಿ ಇದೆ ಎಂದು ಹೇಳುವ ಮೂಲಕ ಕೊನೆಗೆ ಧನ್ಯವಾದ ತಿಳಿಸಿ ಬಜೆಟ್ ಓದಿ ಪೂರ್ಣಗೊಳಿಸಿದರು. ನಂತರ ಎಲ್ಲರೂ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದ್ದೇವೆ ಎಂದು ಸದಸ್ಯರು ತಿಳಿಸಿದರು.

2.79 ಕೋಟಿ ರೂ. ಉಳಿತಾಯ ಬಜೆಟ್:
ನಗರಸಭೆಯಲ್ಲಿ ಶನಿವಾರ ಮಂಡಿಸಿದ 2024-25ನೇ ಸಾಲಿನ ಪರಿಷ್ಕೃತ ಆಯವ್ಯಯ ಬಜೆಟ್ 2.79 ಕೋಟಿ ರೂ. ಉಳಿತಾಯ ಬಜೆಟ್ ಮಂಡಿಸಿದರು. ಒಟ್ಟು ಬಜೆಟ್ ಗಾತ್ರ 194.88 ಕೋಟಿ ರೂ. ಈ ಬಾರಿ ನಗರಸಭೆಗೆ 163 ಕೋಟಿ ರೂ. ಆದಾಯವನ್ನು ನಿರೀಕ್ಷಿಸಲಾಗಿದೆ. ಈ ಬಾರಿ ಖರ್ಚು 192.09 ಕೋಟಿ ರೂ. ಆಗಲಿದೆ ಎಂದು ಅಂದಾಜಿಸಲಾಗಿದೆ.
ಈ ಬಾರಿ ಬಜೆಟ್‌ನಲ್ಲಿ ರಸ್ತೆ, ಪಾದಚಾರಿಗಳ ರಸ್ತೆ ಕಾಮಗಾರಿಗೆ 11 ಕೋಟಿ ರೂ. ಕಾಯ್ದಿರಿಸಲಾಗಿದೆ. ಇದಲ್ಲದೆ ನೀರು ಸರಬರಾಜು ಮತ್ತು ಪೈಪ್ ಲೈನ್ ದುರಸ್ತಿ ಕಾಮಗಾರಿ, ನಿರ್ವಹಣೆಗೆ ಸೇರಿ 10 ಕೋಟಿ ರೂ. ಮೀಸಲಿರಿಸಲಾಗಿದೆ. ಇದಲ್ಲದೆ ಒಳ ಚರಂಡಿ ವ್ಯವಸ್ಥೆ, ಕಟ್ಟಡದ ಕಾಮಗಾರಿ ಮತ್ತು ಪ್ರಮುಖ ವೃತ್ತಗಳ ಅಭಿವೃದ್ಧಿ ಸೇರಿದಂತೆ ಹಲವು ಕಾಮಗಾರಿಗಳನ್ನು ಕೈಗೆತ್ತುಕೊಳ್ಳಲಾಗುವುದೆಂದು ತಿಳಿಸಿದರು.
ಬಜೆಟ್ ಮಂಡನೆ ನಂತರ ಮಾತನಾಡಿದ ನಗರಸಭೆ ಸದಸ್ಯ ಸಿ.ಎಸ್. ಶಂಕರ್, ನನ್ನ ವಾರ್ಡಿನಲ್ಲಿ ನಾಲ್ಕು ವರ್ಷಗಳಿಂದ ಯುಜಿಡಿ ಸಮಸ್ಯೆಯಿಂದ ಜನರು ಪರಿತಪಿಸುತ್ತಿದ್ದಾರೆ. ಆದರೆ ಇದಕ್ಕೆ ಪರಿಹಾರ ನೀಡುವಂತೆ ಮತ್ತು ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮಾಡುವಂತೆ ಒತ್ತಾಯಿಸಿದ್ದೇನೆ. ಅಧಿಕಾರಿಗಳು ನಿರ್ಲಕ್ಷೃ ವಹಿಸಿದ್ದಾರೆ. ಅಲ್ಲಿಯ ಜನರು ಸಾಯಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು
ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಈ ಕೆಲಸವನ್ನು ಒಂದು ವಾರದಲ್ಲಿ ಮಾಡಿಕೊಡುವಂತೆ ನಗರಸಭೆ ಆಯುಕ್ತರಿಗೆ ಸೂಚನೆ ನೀಡಿದರು. ಒಂದು ವೇಳೆ ಇದನ್ನು ಮಾಡದಿದ್ದರೆ ನನ್ನ ಕಚೇರಿಗೆ ಬಂದು ತಿಳಿಸಿ ಎಂದು ಸದಸ್ಯರಿಗೆ ಹೇಳಿದರು.
ನಗರ ಸಭೆ ಸದಸ್ಯ ಎಚ್.ಸಿ. ಮಂಜುನಾಥ್ ಮಾತನಾಡಿ, ನಗರಸಭೆಗೆ ಆದಾಯ ಕಡಿಮೆಯಾಗುತ್ತಿದೆ. ಇದಕ್ಕೆ ಕಾರಣ ಅಕ್ರಮ ಕಟ್ಟಡಗಳು ತಲೆ ಎತ್ತುತ್ತಿವೆ. ಅಲ್ಲದೆ ನರ್ಸಿಂಗ್ ಹೋಮ್‌ಗಳು ಮತ್ತು ಬಾರುಗಳಿಗೆ ವಾಣಿಜ್ಯ ಪರವಾನಗಿಯನ್ನು ತೆಗೆದುಕೊಳ್ಳದೆ ಕಟ್ಟಡ ಕಟ್ಟುತ್ತಿದ್ದಾರೆ. ಇದರಿಂದ ನಗರಸಭೆಗೆ ಆದಾಯ ಕಡಿಮೆಯಾಗುತ್ತಿದೆ. ಇದರ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ನಂತರ ಜಿಲ್ಲಾಧಿಕಾರಿ ಮಾತನಾಡಿ ಬಾರ್‌ಗಳ ವಿಚಾರವಾಗಿ ನಾನು ಈಗಾಗಲೇ ಅಧಿಕಾರಿಗಳ ಜತೆ ಮಾತನಾಡಿದ್ದೇನೆ. ಈಗ ಚುನಾವಣೆ ಘೋಷಣೆಯಾಗುವುದರಿಂದ ನಾನು ಅದರ ಬಗ್ಗೆ ಮಾತನಾಡಲು ಹೋಗುವುದಿಲ್ಲ. ಚುನಾವಣೆ ಮುಗಿದ ಮೇಲೆ ನಾನು ಒಂದು ಸರ್ವೆ ನಡೆಸಿ ಅನುಮತಿ ಇಲ್ಲದ ಬಾರ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದೆಂದು ಹೇಳಿದರು.

ಎಲ್ಲಾ ಸದಸ್ಯರು ಆರೋಗ್ಯವಾಗಿದ್ದೀರಾ?:
ಬಜೆಟ್ ಮಂಡನ ಸಭೆಯಲ್ಲಿ ಸದಸ್ಯರು ಏರು ಧ್ವನಿಯಿಂದ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಆಗ ಜಿಲ್ಲಾಧಿಕಾರಿಗಳು ಎಲ್ಲಾ ಸದಸ್ಯರ ಆರೋಗ್ಯ ಸರಿಯಾಗಿದೆ. ಅಲ್ಲವೇ ದಯವಿಟ್ಟು ಮಾತನಾಡಬೇಡಿ ಮತ್ತು ಎಲ್ಲರೂ ಕೂಡ ಸಮಾಧಾನದಿಂದ ಮಾತನಾಡಿ. ತಮ್ಮ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಿ ಎಂದು ಸಲಹೆ ನೀಡಿದರು.

ಅರ್ಧಕ್ಕೆ ಹೊರಟ ಡಿಸಿ ಸದಸ್ಯರ ಆಕ್ರೋಶ:
ಬಜೆಟ್ ಮಂಡಿಸಿ ಅನುಮೋದನೆ ಪಡೆದು ಕೆಲವರ ಅಭಿಪ್ರಾಯ ಪಡೆದ ನಂತರ ಜಿಲ್ಲಾಧಿಕಾರಿ ಚುನಾವಣಾ ಆಯುಕ್ತರ ವಿಡಿಯೋ ಸಂವಾದ ಇದ್ದ ಕಾರಣ ಸಭೆಯಿಂದ ನಿರ್ಗಮಿಸಿದರು. ಆಗ ಮಹಿಳಾ ಸದಸ್ಯರು ಮತ್ತು ಕೆಲಸ ಸದಸ್ಯರು ಆಕೋಶ ವ್ಯಕ್ತಪಡಿಸಿ, ನಾವು ಯಾರ ಹತ್ತಿರ ನಮ್ಮ ಸಮಸ್ಯೆಯನ್ನು ಹೇಳಿಕೊಳ್ಳೋಣ. ಕೇವಲ ಕೆಲವೇ ಕೆಲವು ಸದಸ್ಯರು ಎದ್ದು ನಿಂತು ಮಾತನಾಡುತ್ತಾರೆ. ಉಳಿದವರಿಗೆ ಅವಕಾಶ ಕೊಡುವುದಿಲ್ಲ ಎಂದು ಮಹಿಳಾ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ ಮೈಕ್ ಬಿಸಾಡಿದ ಘಟನೆಯೂ ಕೂಡ ನಡೆಯಿತು.