ಹನೂರು: ತಾಲೂಕಿನ ಕೌದಳ್ಳಿ ಗ್ರಾಮದಲ್ಲಿ ಬುಧವಾರ ಸಂಜೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ವಿಶ್ವೇಶ್ವರಯ್ಯ ಹಾಗೂ ತಂಡ ದಾಳಿ ನಡೆಸಿ 3 ನಕಲಿ ಕ್ಲಿನಿಕ್‌ಗಳನ್ನು ಬಂದ್ ಮಾಡಿಸಿದೆ. ಗ್ರಾಮದ ಆದಮ್ಸ್, ಜನತಾ ಹಾಗೂ ದೀಪಾ ಕ್ಲಿನಿಕ್‌ಗಳನ್ನು ಬಂದ್ ಮಾಡಿಸಲಾಯಿತು.
ತಾಲೂಕಿನ ಕೌದಳ್ಳಿ ಸೇರಿದಂತೆ ಅಜ್ಜೀಪುರ, ರಾಮಾಪುರ, ಕೂಡ್ಲೂರು ಹಾಗೂ ಈ ಭಾಗದ ಇನ್ನಿತರೆ ಕಡೆಗಳಲ್ಲಿ ಕೆಲವರು ನಕಲಿ ಕ್ಲಿನಿಕ್‌ಗಳನ್ನು ತೆರೆದು ಆಯುರ್ವೇದಿಕ್ ಚಿಕಿತ್ಸೆ ಜತೆಗೆ ಅಲೋಪತಿ ಔಷಧವನ್ನು ಸಹ ನೀಡಿ ಜನರನ್ನು ವಂಚಿಸುತ್ತಿದ್ದರು. ಈ ಬಗ್ಗೆ ಕೌದಳ್ಳಿ ಗ್ರಾಮದ ಆದಮ್ ಕ್ಲಿನಿಕ್‌ನಲ್ಲಿ ಚಿಕಿತ್ಸೆ ನೀಡುತ್ತಿದ್ದ ದೃಶ್ಯ ಸಾಮಾಜಿಕ ತಾಣದಲ್ಲಿ ವೈರಲ್ ಅಗಿತ್ತು. ಈ ಬಗ್ಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದರಲ್ಲದೆ ಅರೋಗ್ಯ ಇಲಾಖೆ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದರು.
ಈ ಹಿನ್ನಲೆಯಲ್ಲಿ ಡಿಎಚ್‌ಒ ಡಾ.ವಿಶ್ವೇಶ್ವರಯ್ಯ, ತಾಲೂಕು ಪ್ರಭಾರ ಅರೋಗ್ಯಾಧಿಕಾರಿ ಡಾ.ಪ್ರಕಾಶ್ ಹಾಗೂ ತಂಡ ಬುಧವಾರ ಸಂಜೆ ಕೌದಳ್ಳಿ ಗ್ರಾಮದ 3 ನಕಲಿ ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಿ ಬಂದ್ ಮಾಡಿಸಿದ್ದು, ಸಂಬಂಧಪಟ್ಟವರಿಗೆ ನೋಟಿಸ್ ನೀಡಲಾಗಿದೆ.
ಡಿಎಚ್‌ಒ ಡಾ.ವಿಶ್ವೇಶ್ವರಯ್ಯ ವಿಜಯವಾಣಿಯೊಂದಿಗೆ ಮಾತನಾಡಿ, ತಾಲೂಕಿನಲ್ಲಿ ಈಗಾಗಲೇ ಆರೋಗ್ಯಾಧಿಕಾರಿ ಹಾಗೂ ಆಯುಷ್ ವೈದ್ಯರ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿದೆ. ಕ್ಲಿನಿಕ್‌ಗಳ ಅನುಮತಿ ಪ್ರಮಾಣ ಪತ್ರವನ್ನು ಪರಿಶೀಲಿಸಲು ಸೂಚಿಸಲಾಗಿದೆ. ಈ ವೇಳೆ ನಕಲಿ ಕ್ಲಿನಿಕ್ ಎಂದು ಕಂಡುಬಂದರೆ, ಕೂಡಲೇ ಸಂಬಂಧಪಟ್ಟವರ ವಿರುದ್ಧ ಎಫ್‌ಐಆರ್ ದಾಖಲಿಸಿ ಕ್ಲಿನಿಕ್ ಬಂದ್ ಮಾಡುವಂತೆ ನಿರ್ದೇಶನ ನೀಡಲಾಗಿದೆ. ಪ್ರಮಾಣ ಪತ್ರ ನವೀಕರಣ ಆಗದಿದ್ದಲ್ಲಿ ಅಲ್ಲಿಯವರೆಗೆ ಕ್ಲಿನಿಕ್ ಮುಚ್ಚುವಂತೆ ಸೂಚಿಸಲಾಗಿದೆ. ಇನ್ನು 3 ದಿನದಲ್ಲಿ ತಾಲೂಕಿನ ಎಲ್ಲ ಕ್ಲಿನಿಕ್‌ಗಳ ಪ್ರಮಾಣ ಪತ್ರವನ್ನು ಪರಿಶೀಲಿಸುವ ಮೂಲಕ ನಕಲಿ ಕ್ಲಿನಿಕ್‌ಗಳಿಗೆ ಕಡಿವಾಣ ಹಾಕಲು ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.