ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ಆಯೋಜಿಸಿದ್ದ ವಿದ್ಯುತ್ ದರ ಪರಿಷ್ಕರಣಾ ಸಭೆಯಲ್ಲಿ ಕ.ವಿ.ನಿ. ಆಯೋಗದ ಅಧ್ಯಕ್ಷ ಎಚ್.ಎಂ. ಮಂಜುನಾಥ ಮಾತನಾಡಿದರು. ಅಧ್ಯಕ್ಷ ಕಲಗೌಡ ಪಾಟೀಲ, ಕೆ.ಎಲ್. ಶ್ರೀನಿವಾಸ, ಸ್ಥಾನಿಕ ಅಭಿಯಂತ ನೇಮಿನಾಥ ಖೇಮಲಾಪುರೆ ಇತರರು ಇದ್ದರು. 
ಜಿಲ್ಲೆ

ಮೂರು ತಿಂಗಳಿಗೊಮ್ಮೆ ಸಭೆ ಮಾಡಿ

ಹುಕ್ಕೇರಿ: ವಿದ್ಯುತ್ ಸರಬರಾಜು ಆಡಳಿತ ಮಂಡಳಿ ಸದಸ್ಯರ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ ಚರ್ಚಿಸಿ, ಸಮಸ್ಯೆಗಳನ್ನು ಪರಿಹರಿಸುವ ಕಾರ್ಯ ಮಾಡಬೇಕು. ಸದಸ್ಯರು ಸಂಘದ ಹಿತಾಸಕ್ತಿಗೆ ಅನುಗುಣವಾಗಿ ನಡೆಯಬೇಕು. ಆಗ ಮಾತ್ರ ಸಹಕಾರಿ ತತ್ತ್ವ ಪರಿಪಾಲನೆಯಾಗುತ್ತದೆ ಎಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ ಎಚ್.ಎಂ. ಮಂಜುನಾಥ ಹೇಳಿದರು.

ಸ್ಥಳೀಯ ವಿದ್ಯುತ್ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ವಿದ್ಯುತ್ ದರ ಪರಿಷ್ಕರಣಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಸಹಕಾರಿ ತತ್ತ್ವದಡಿ ನಡೆಯುತ್ತಿರುವ ದೇಶದ ಏಕೈಕ ವಿದ್ಯುತ್ ಸರಬರಾಜು ಸಂಘಕ್ಕೆ ಆಡಳಿತ ಮಂಡಳಿ, ಸಿಬ್ಬಂದಿ ಮತ್ತು ಸದಸ್ಯರ ಸಹಕಾರವೇ ಬಲವಾಗಿದೆ ಎಂದು ಹೇಳಿದರು. ಸಂಘದ ಸದಸ್ಯರಾಮಚಂದ್ರ ಜೋಶಿ, ತಮ್ಮಣಗೌಡ ಪಾಟೀಲ, ಭೀಮಾನಂದ ಮುದಕಣ್ಣವರ, ಸಿ.ಪಿ. ಪಾಟೀಲ ಮತ್ತಿತರರು ಮಾತನಾಡಿ, ರೈತರಿಗೆ ರಾತ್ರಿ ವೇಳೆ ಏಳು ಗಂಟೆ ವಿದ್ಯುತ್ ಪೂರೈಸುವ ಬದಲಾಗಿ ಹಗಲಿನ ವೇಳೆ ಸರಬರಾಜು ಮಾಡಬೇಕು. ಕೋವಿಡ್‌ನಿಂದಾಗಿ ತೊಂದರೆಯಲ್ಲಿರುವ ಸದಸ್ಯರಿಗೆ ದರ ಏರಿಕೆಯಿಂದ ಆರ್ಥಿಕ ಹೊರೆಯಾಗುತ್ತದೆ. ಹೀಗಾಗಿ ವಿದ್ಯುತ್ ದರ ಹೆಚ್ಚಿಸಬಾರದು. ಬಾಹ್ಯ ವಿದ್ಯುತ್ ಉತ್ಪಾದನೆಗಾಗಿ ಗುಜರಾತ ಮಾದರಿಯಲ್ಲಿ ಕಾಲುವೆಗಳ ಮೇಲೆ ಸೋಲಾರ್ ಪ್ಯಾನಲ್ ಅಳವಡಿಸಬೇಕು ಎಂದು ಸಲಹೆ ನೀಡಿದರು.

ಸಂಘದ ಸ್ಥಾನಿಕ ಅಭಿಯಂತ ನೇಮಿನಾಥ ಖೇಮಲಾಪುರೆ ಪ್ರತಿಕ್ರಿಯಿಸಿ, ನೀರಾವರಿ ಇಲಾಖೆ ಕಾಲುವೆ ಮೇಲೆ ಸೋಲಾರ ಪ್ಯಾನಲ್ ಅಳವಡಿಸಲು ಅವಕಾಶ ನೀಡುವುದಿಲ್ಲ. ಅದಕ್ಕಾಗಿ ಸಂಘದ ಮಾರ್ಗದರ್ಶಕರಾದ ಸಚಿವ ಉಮೇಶ ಕತ್ತಿ ಮತ್ತು ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಅವರ ಸಲಹೆಯಂತೆ ಪ್ರತ್ಯೇಕ ಸ್ಥಳ ಗುರುತಿಸಿ ಅಲ್ಲಿ ಸೋಲಾರ್ ಪ್ಯಾನಲ್ ಅಳವಡಿಸಿ 100 ಮೇ.ವ್ಯಾ. ವಿದ್ಯುತ್ ಉತ್ಪಾದನೆಗೆ ಪ್ರಯತ್ನಿಸುತ್ತಿದ್ದೇವೆ.ಇದಕ್ಕಾಗಿ ಬೆಂಗಳೂರು ಮೂಲದ ಐಡ್ಯಾಕ್ ಕಂಪನಿಯೊಂದಿಗೆ ವ್ಯವಹರಿಸಲಾಗುತ್ತಿದೆ ಎಂದು ತಿಳಿಸಿದರು.

ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗದ ಅಧಿಕಾರಿಗಳು ಮಾತನಾಡಿ, ಪ್ರಸ್ತುತ ಇರುವ ವಿದ್ಯುತ್ ಸರಬರಾಜು ವ್ಯವಸ್ಥೆಯಲ್ಲಿ ಹಗಲು ಹೊತ್ತು ರೈತರಿಗೆ ನಿರಂತರವಾಗಿ ಏಳು ಗಂಟೆ ವಿದ್ಯುತ್ ಸರಬರಾಜು ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಸರಬರಾಜು ಕೇಂದ್ರಗಳನ್ನು ಸರ್ಕಾರ ಹೆಚ್ಚಿಸುತ್ತಿದ್ದು, ಅದರ ನಂತರ ಸದಸ್ಯರ ಬೇಡಿಕೆ ಪೂರ್ಣಗೊಳಿಸಲು ಸಾಧ್ಯ ಎಂದರು.

ಕ.ವಿ.ನಿ. ಆಯೋಗದ ಟಿ. ರೇಖಾ, ಎಚ್.ಎಂ. ಉಮಾ, ಪ್ರಭಾಕರ ರಾವ್, ಸಂಘದ ಅಧ್ಯಕ್ಷ ಕಲಗೌಡ ಪಾಟೀಲ, ಉಪಾಧ್ಯಕ್ಷ ವಿಷ್ಣು ರೇಡೇಕರ, ಪಥ್ವಿ ಕತ್ತಿ, ಕುನಾಲಗೌಡ ಪಾಟೀಲ, ರವೀಂದ್ರ ಹಿಡಕಲ್, ಬಸಗೌಡ ಮಗೆಣ್ಣವರ, ಜಯಗೌಡ ಪಾಟೀಲ, ನಿರ್ದೇಶಕರು, ವ್ಯವಸ್ಥಾಪಕ ದುರದುಂಡಿ ನಾಯಿಕ, ಅಭಿಯಂತರರಾದ ಉದಯ ಮಗದುಮ್ಮ ಇತರರು ಇದ್ದರು.