ಗುಂಡ್ಲುಪೇಟೆ: ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಮೂರು ತಿಂಗಳಿಗೊಮ್ಮೆ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಪರಿಶಿಷ್ಟ ಜಾತಿ, ಪಂಗಡದವರ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಡಿವೈಎಸ್ಪಿ ಲಕ್ಷ್ಮಯ್ಯ ಭರವಸೆ ನೀಡಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶನಿವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಕುಂದುಕೊರತೆ ಸಭೆಯಲ್ಲಿ ಸಮಸ್ಯೆಗಳನ್ನು ಆಲಿಸಿ ನಂತರ ಅವರು ಮಾತನಾಡಿದರು. ಪರಿಶಿಷ್ಟ ಜಾತಿ, ಪಂಗಡದವರ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಪೊಲೀಸ್ ಇಲಾಖೆ ಯಾವಾಗಲೂ ಸಿದ್ಧವಾಗಿದೆ. ಸಂತ್ರಸ್ಥರು ದೂರು ನೀಡಿದ ಕೂಡಲೇ ಪೊಲೀಸರು ಕಾರ್ಯಪ್ರವೃತ್ತರಾಗಿ ನ್ಯಾಯ ಒದಗಿಸಲು ಕ್ರಮಕೈಗೊಳ್ಳುತ್ತಿದ್ದಾರೆ ಎಂದರು.
ತಾಲೂಕಿನ ಆಗತಗೌಡನಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಭಾವಚಿತ್ರ ಇಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದ ಗ್ರಾಮಸ್ಥರ ಮೇಲೆ ಹಲ್ಲೆ ನಡೆಸಿ ಅಂಬೇಡ್ಕರ್ ಭಾವಚಿತ್ರವನ್ನು ಒಡೆದು ಹಾಕಿರುವ ಘಟನೆ ನಡೆದಿದ್ದರೂ ಇನ್ನೂ ಆರೋಪಿಗಳನ್ನು ಬಂಧಿಸಿಲ್ಲ. ಆದ್ದರಿಂದ ಕೂಡಲೇ ಆರೋಪಿಗಳನ್ನು ಬಂಧಿಸಿ ಗಡಿಪಾರು ಮಾಡುವಂತೆ ಮುಖಂಡರು ಆಗ್ರಹಿಸಿದರು. ಡಿ.6ರಂದು ಪಟ್ಟಣದ ತಾಲೂಕು ಕಚೇರಿಯಲ್ಲಿ ನಡೆದ ಅಂಬೇಡ್ಕರ್ ಪರಿನಿಬ್ಬಾಣ ದಿನ ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದ ಶಾಸಕರನ್ನು ಪ್ರಶ್ನಿಸಿದ ದಲಿತ ಮುಖಂಡ ಚಿಕ್ಕಣ್ಣ ಅವರನ್ನು ಹೊರದೂಡುವಂತೆ ಶಾಸಕರ ಬೆಂಬಲಿಗ, ಉದ್ಯಮಿ ಪ್ರದೀಪ್ ಪೊಲೀಸರಿಗೆ ಸೂಚನೆ ನೀಡಿರುವುದು ಎಷ್ಟರ ಮಟ್ಟಿಗೆ ಸರಿ? ಈತನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ದಲಿತ ಮುಖಂಡರು ಒತ್ತಾಯಿಸಿದರು.
ತಾಲೂಕಿನಲ್ಲಿ 4 ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದ ದೂರುಗಳು ದಾಖಲಾಗಿದ್ದು, ಎರಡು ಪ್ರಕರಣಗಳಲ್ಲಿ ಮಾತ್ರ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. ಉಳಿದ ಪ್ರಕರಣಗಳಲ್ಲಿ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ ಎಂದು ರಂಗಸ್ವಾಮಿ ದೂರಿದರು.
ಹುಲಸಗುಂದಿ ಮುತ್ತಣ್ಣ ಮಾತನಾಡಿ, ಎಸ್ಸಿ ಎಸ್ಟಿ ಕಾಯ್ದೆ ಅನ್ವಯ ಪ್ರಕರಣ ದಾಖಲಾದರೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲ. ದೂರಿಗೆ ಪ್ರತಿ ದೂರು ದಾಖಲಾಗುವುದರಿಂದ ನ್ಯಾಯ ದೊರಕುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ನಾಗುಸ್ವಾಮಿ ಮಾತನಾಡಿ ಸವರ್ಣೀಯರ ಬೀದಿಗಳಲ್ಲಿ ಹೆಚ್ಚಿನ ಕಾನೂನು ಅರಿವು ಶಿಬಿರ ಆಯೋಜಿಸಿ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು. ಅರಣ್ಯ ಇಲಾಖೆ ಪರಿಶಿಷ್ಟ ವರ್ಗಕ್ಕೆ ಸೇರಿದ ವ್ಯಕ್ತಿಯ ಜಮೀನಿನನ್ನು ವಶಕ್ಕೆ ಪಡೆದು ಆತನ ವಿರುದ್ಧವೇ ಪ್ರಕರಣ ದಾಖಲಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಹಸೀಲ್ದಾರ್ ಟಿ.ರಮೇಶ್ ಬಾಬು, ಸರ್ಕಲ್ ಇನ್‌ಸ್ಪೆಕ್ಟರ್ ಪರಶಿವಮೂರ್ತಿ, ಸಬ್‌ಇನ್‌ಸ್ಪೆಕ್ಟರ್ ಸಾಹೇಬಗೌಡ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮೋಹನ್ ಕುಮಾರ್, ತಾಲೂಕು ಪಂಚಾಯಿತಿ ಇಒ ಷಣ್ಮುಗ, ಅಬ್ಕಾರಿ ಇನ್‌ಸ್ಪೆಕ್ಟರ್ ದೀಪಾ, ತಾಲೂಕು ಆರೋಗ್ಯಾಧಿಕಾರಿ ಡಾ.ಅಲೀಂಪಾಶಾ, ಸಾರ್ವಜನಿಕ ಆಸ್ಪತ್ರೆ ವೈದ್ಯ ಡಾ.ರವಿ, ಬಫರ್ ವಲಯ ಅರಣ್ಯಾಧಿಕಾರಿ ಸತೀಶ್ ಕುಮಾರ್ ಇದ್ದರು.