ಜಿಲ್ಲೆ

ಮೂರು ಖಾಸಗಿ ಆಸ್ಪತ್ರೆಗಳ ಸ್ಕ್ಯಾನಿಂಗ್ ಮಷೀನ್ ಸೀಜ್

ವಿಶೇಷ ವರದಿ ಬಾಗಲಕೋಟೆ:

ಜಿಲ್ಲೆಯಲ್ಲಿ ಭ್ರೂಣಲಿಂಗ ಪತ್ತೆ ಹಾಗೂ ಗರ್ಭಪಾತ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಲೇ ಇದ್ದು, ಸಂಪೂರ್ಣ ಕಡಿವಾಣ ಬೀಳುತ್ತಿಲ್ಲ ಎನ್ನುವ ಸಾರ್ವಜನಿಕ ಧ್ವನಿ ಬಲವಾಗುತ್ತಿರುವ ಬೆನ್ನಲ್ಲೆ ಇದೀಗ ಜಿಲ್ಲೆಯ ಮೂರು ಖಾಸಗಿ ಆಸ್ಪತ್ರೆಗಳ ಸ್ಕ್ಯಾನಿಂಗ್ ಸೆಂಟರ್ ಗಳ ಮೇಲೆ ಕೇಂದ್ರ ಆರೋಗ್ಯ ತಂಡ ದಾಳಿ ನಡೆಸಿ, ಅಲ್ಲಿನ ಸ್ಕ್ಯಾನಿಂಗ್ ಮಷೀನ್ ಸೀಜ್ ಮಾಡಿವೆ.!!

ಮಂಗಳವಾರ ಮತ್ತು ಬುಧವಾರ ಎರಡು ದಿನ ಜಿಲ್ಲೆಯಲ್ಲೆ ಬೀಡುಬಿಟ್ಟಿದ್ದ ಕೇಂದ್ರದ ಆರೋಗ್ಯ ಇಲಾಖೆಯ ಪಿಸಿಪಿಎನ್‌ಡಿಟಿ ಕಾಯ್ದೆ ಅನುಷ್ಠಾನ ತಂಡವು, ಒಟ್ಟು ಮೂರು ಖಾಸಗಿ ಆಸ್ಪತ್ರೆಗಳಲ್ಲಿ ಭ್ರೂಣಲಿಂಗ ಪತ್ತೆ ಹಾಗೂ ಗರ್ಭಪಾತಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ಅಲ್ಲಿದ್ದ ಸ್ಕ್ಯಾನಿಂಗ್ ಮಷೀನ್ ಹಾಗೂ ಕೊಠಡಿಗಳನ್ನು ಸೀಜ್ ಮಾಡಿದ್ದಾಗಿ ಬಾಗಲಕೋಟೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಽಕಾರಿ ಡಾ.ಜಯಶ್ರೀ ಎಮ್ಮಿ ದೃಢಪಡಿಸಿದ್ದಾರೆ.

ಮಂಗಳವಾರ ಜಿಲ್ಲೆಯ ಮುಧೋಳ ನಗರದಲ್ಲಿ ಇರುವ ಮಲಘಾಣ ಆಸ್ಪತ್ರೆ ಹಾಗೂ ಬಾದಾಮಿ ಪಟ್ಟಣದ ರೇಣುಕಾ ಆಸ್ಪತ್ರೆ ಮತ್ತು ಬುಧವಾರ ಗುಳೇದಗುಡ್ಡದಲ್ಲಿ ಡಾ.ಬಂಟನೂರ ಅವರ ಆಸ್ಪತ್ರೆಯ ಮೇಲೆ ಕೇಂದ್ರ ತಂಡವು ದಾಳಿ ನಡೆಸಿದ್ದು, ಅಲ್ಲಿ ಭ್ರೂಣಲಿಂಗ ಪತ್ತೆ ಮಾಡಿರುವ ಬಗ್ಗೆ ಸ್ಕ್ಯಾನಿಂಗ್ ರಿಪೋರ್ಟ್ಗಳು ದೊರೆತಿವೆ ಎಂದು ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಆ ಆಸ್ಪತ್ರೆಗಳ ಸ್ಕ್ಯಾನಿಂಗ್ ಮಷೀನ್ ಹಾಗೂ ಕೊಠಡಿ ಸೀಜ್ ಮಾಡಿದ್ದಾರೆ. ಕೆಪಿಎಂಇ ಕಾಯ್ದೆ ಅಡಿಯಲ್ಲಿ ಮುಂದಿನ ಕ್ರಮ ತೆಗೆದುಕೊಳ್ಳಲು ತಮಗೆ ನಿರ್ದೇಶನ ನೀಡಿದ್ದಾರೆಂದು ಡಿಎಚ್‌ಒ ಜಯಶ್ರೀ ಎಮ್ಮಿ ತಿಳಿಸಿದ್ದಾರೆ.

ಮುಧೋಳ ನಗರದಲ್ಲಿ ಬಿಎಎಂಎಸ್ ಓದಿರುವ ಡಾ.ಆಶಾ ಮಲಘಾಣ ಅವರು ಅರ್ಹತೆ ಇಲ್ಲದಿದ್ದರೂ ಸ್ಕ್ಯಾನಿಂಗ್ ಮಾಡಿದ್ದಾರೆ ಎನ್ನುವುದು ದಾಖಲೆ ಪರಿಶೀಲನೆ ವೇಳೆ ತಂಡಕ್ಕೆ ಕಂಡು ಬಂದಿದೆ. ಅರ್ಹ ತಜ್ಞರಿಂದ ಸ್ಕ್ಯಾನಿಂಗ್ ಮಾಡಿಸುತ್ತೇವೆ ಎಂದು ವೈದ್ಯೆ ಹೇಳಿದ್ದರಾದರೂ ತಂಡವು ಆ ವ್ಯಕ್ತಿಯನ್ನು ಕರೆಸಿ ವಿಚಾರಿಸಿದಾಗ ತಾನು ಮೂರು ತಿಂಗಳಿಂದ ಆಸ್ಪತ್ರೆಗೆ ಬಂದಿಲ್ಲ ಎಂದು ಹೇಳಿದ್ದಾನೆ. ಇದರಿಂದ ಸ್ಕ್ಯಾನಿಂಗ್ ಬಿಎಎಂಎಸ್ ವೈದ್ಯರೇ ಮಾಡಿದ್ದಾರೆ ಎನ್ನುವುದು ತಂಡಕ್ಕೆ ಮನವರಿಕೆ ಆಗಿ, ಸ್ಕ್ಯಾನಿಂಗ್ ಮಷೀನ್ ಮತ್ತು ಕೊಠಡಿಯನ್ನು ಜಪ್ತಿ ಮಾಡಿದ್ದಾರೆ.

ಬಾದಾಮಿ ಪಟ್ಟಣದಲ್ಲಿ ಡಾ.ಕವಿತಾ ಶಿವನಾಯ್ಕರ್ ಅವರು ಬಾದಾಮಿ ತಾಲೂಕು ಆಸ್ಪತ್ರೆಯ ವೈದ್ಯ ಆಗಿದ್ದರೂ ಹೆಚ್ಚಾಗಿ ತಮ್ಮ ಖಾಸಗಿ ಆಸ್ಪತ್ರೆಯಲ್ಲಿ ಇರುತ್ತಾರೆ ಎನ್ನುವ ದೂರು ಇತ್ತು. ಜೊತೆಗೆ ಖಾಸಗಿ ಆಸ್ಪತ್ರೆಯಲ್ಲಿ ಭ್ರೂಣಲಿಂಗ ಪತ್ತೆ ಹಾಗೂ ಗರ್ಭಪಾತ ಮಾಡಿರುವುದು ದಾಖಲೆಗಳಲ್ಲಿ ಕಂಡು ಬಂದಿದ್ದರಿಂದ ಅವರ ಆಸ್ಪತ್ರೆಯ ಸ್ಕ್ಯಾನಿಂಗ್ ಮಷೀನ್ ಮತ್ತು ಕೊಠಡಿಯನ್ನು ಸೀಜ್ ಮಾಡಿದ್ದಾರೆ.

ಇನ್ನು ಬುಧವಾರ ಕೇಂದ್ರ ತಂಡವು ಗುಳೇದಗುಡ್ಡದಲ್ಲಿ ಇರುವ ಡಾ.ಬಸವರಾಜ್ ಬಂಟನೂರ ಅವರಿಗೆ ಸೇರಿದ ಆಸ್ಪತ್ರೆಗೆ ಭೇಟಿ ನೀಡಿದಾಗ ಅಲ್ಲಿಯೂ ಭ್ರೂಣಲಿಂಗ ಪತ್ತೆ ಮಾಡಿರುವ ಬಗ್ಗೆ ದಾಖಲೆಗಳು ಲಭ್ಯವಾಗಿದ್ದು, ಅಲ್ಲಿಯೂ ಸಹ ಮಷೀನ್ ಹಾಗೂ ಕೊಠಡಿ ಸೀಜ್ ಮಾಡಿದ್ದಾರೆ ಎಂದು ಡಿಎಚ್‌ಒ ಡಾ.ಜಯಶ್ರೀ ಎಮ್ಮಿ ತಿಳಿಸಿದ್ದಾರೆ.

ಕೋರ್ಟ್ನಲ್ಲಿ ಪ್ರಕರಣ ದಾಖಲು :
ಭ್ರೂಣಲಿಂಗ ಪತ್ತೆ ಹಾಗೂ ಗರ್ಭಪಾತದಲ್ಲಿ ಸರ್ಕಾರದ ನಿಯಮ ಉಲ್ಲಂಘನೆ ಮಾಡಿದ್ದು, ಇದೀಗ ಕೇಂದ್ರದ ತಂಡದ ನಿರ್ದೇಶನದ ಮೇರಿಗೆ ಮೂರು ಆಸ್ಪತ್ರೆಗಳ ಸಂಬಂಧಪಟ್ಟ ವೈದ್ಯರು ಹಾಗೂ ಸ್ಕ್ಯಾನಿಂಗ್ ಮಷೀನ್ ಮಾಲೀಕರ ಮೇಲೆ ಆಯಾ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಿಸಲಾಗುವುದು. ಇದು ಪಿಸಿಪಿಎನ್‌ಡಿಪಿ ಅಡಿಯಲ್ಲಿ ಕೇಸ್ ಆಗಲಿದೆ. ಇನ್ನು ಕೆಪಿಎಂಇ ಕಾಯ್ದೆ ಅಡಿಯಲ್ಲಿ ಈ ಆಸ್ಪತ್ರೆಗಳಿಗೆ ನೀಡಿರುವ ಪರವಾಣಿಗೆ ಪರಿಶೀಲನೆ ನಡೆಸಿ, ಅಗತ್ಯ ಬಿದ್ದರೆ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ ಎನ್ನುತ್ತಾರೆ ಡಿಎಚ್‌ಒ ಡಾ.ಜಯಶ್ರೀ ಎಮ್ಮಿ.