ಆನೇಕಲ್: ಮೂರು ಪ್ರತ್ಯೇಕ ಕೊಲೆ ಪ್ರಕರಣ ಭೇದಿಸಿರುವ ಆನೇಕಲ್ ಉಪವಿಭಾಗದ ಪೊಲೀಸರು, ಹೊರ ರಾಜ್ಯದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ತಿಳಿಸಿದರು.
ಈ ಬಗ್ಗೆ ಹೆಬ್ಬಗೋಡಿ ಠಾಣೆಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಹಣ ಕೇಳಿದ್ದಕ್ಕೆ ಕೊಲೆ: ಜಿಗಣಿ ಸಮೀಪದ ಹೆನ್ನಾಗರ ಕೆರೆಯಲ್ಲಿ ಫೆಬ್ರವರಿ 18ರಂದು ಸುಮಾರು 30 ವರ್ಷದ ಅಪರಿಚಿತ ಮಹಿಳೆ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕೊಲೆ ಎನ್ನುವ ಅನುಮಾನದ ಮೇರೆಗೆ ಜಿಗಣಿ ಠಾಣೆ ಇನ್‌ಸ್ಪೆಕ್ಟರ್ ಶೇಖರ್ ನೇತೃತ್ವದ ತಂಡ ರಚಿಸಲಾಗಿತ್ತು. ಮಹಿಳೆಯ ಕೈ ಮೇಲಿನ ಹಚ್ಚೆ ಗುರುತು ಹಿಡಿದು ತನಿಖೆ ಕೈಗೊಂಡಾಗ ಮಹಿಳೆ ಪಶ್ಚಿಮ ಬಂಗಾಳದ ಮುರಶೀದಾಬಾದ್ ಜಿಲ್ಲೆಯ ಗೋಕರ್ಣ ಗ್ರಾಮದ ಸುಪ್ರಿಯಾ ಸೇನ್ ಎನ್ನುವುದು ತಿಳಿದು ಬಂದಿತ್ತು.
ಅದೇ ರಾಜ್ಯದ ಮುಚ್ಚಾ ಶೇಖ್ ಎಂಬಾತ ವರ್ಷದ ಹಿಂದೆ ಬೆಂಗಳೂರಿಗೆ ಬಂದು, ಕೂಲಿ ಕೆಲಸದ ಜತೆಗೆ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ. ಈತ ಸುಪ್ರಿಯಾ ಸೇನ್‌ಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಬೆಂಗಳೂರಿಗೆ ಕರೆಸಿಕೊಂಡು ವೇಶ್ಯವಾಟಿಕೆಗೆ ಬಳಸಿಕೊಂಡಿದ್ದ.
ಮುಚ್ಚಾ ಶೇಕ್‌ಗೆ ಪರಿಚಯಸ್ಥರಾಗಿದ್ದ ಅಸ್ಸಾಂ ಮೂಲದ ರಾಜುಸುನಾರ್, ಬಾಲ್ ಬಹುದ್ದೂರ್ ಚೇತ್ರಿ, ಅಶೋಕ್ ರಾಜ್ ಬೋಂಗ್ಲಿ ಜಿಗಣಿ ಸಮೀಪದ ಮಾಸ್ತೇನಹಳ್ಳಿಯಲ್ಲಿ ನೆಲೆಸಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಪರಿಚಯಸ್ಥನಾಗಿದ್ದ ಮುಚ್ಚಾ ಶೇಕ್‌ಗೆ ಸುಪ್ರಿಯಾ ಸೇನ್‌ಳನ್ನು ವೇಶ್ಯವಾಟಿಕೆಗೆ ಕಳುಹಿಸಿ ಕೊಡುವಂತೆ ತಿಳಿಸಿದ್ದರು. ಆಕೆಯನ್ನು ಕರೆಸಿಕೊಂಡ ಮೂವರು ದೈಹಿಕ ಸಂಪರ್ಕ ಬೆಳೆಸಿದ್ದಾರೆ. ಬಳಿಕ ಹಣ ನೀಡುವಂತೆ ಆಕೆ ಕೇಳಿದಾಗ ಕೊಲೆ ಮಾಡಿ ಹೆನ್ನಾಗರ ಕೆರೆಗೆ ಎಸೆದು ಆರೋಪಿಗಳು ರಾಜ್ಯವನ್ನೇ ತೊರೆದು ಪರಾರಿಯಾಗಿದ್ದರು.
ಜಿಗಣಿ ಇನ್‌ಸ್ಪೆಕ್ಟರ್ ಶೇಖರ್ ನೇತೃತ್ವದ ತಂಡ ಹೊರರಾಜ್ಯಗಳಿಗೆ ತೆರಳಿದ್ದ ಆರೋಪಿಗಳಾದ ಅಸ್ಸಾಂ ಮೂಲದ ರಾಜುಸುನಾರ್ (33) ಬಾಲ್ ಬಹುದ್ದೂರ್ ಚೇತಿ (21), ಅಶೋಕ್ ರಾಜ್ ಬೋಂಗ್ಲಿ (27), ಪ್ರಿಯಕರ ಮುಚ್ಚಾ ಶೇಕ್ (28)ನನ್ನು ಬಂಧಿಸಿ ಜೈಲಿಗೆ ಕಳುಹಿಸಿದೆ.
ಹಣಕ್ಕಾಗಿ ಅಪಹರಿಸಿದ್ದವನ ಬಂಧನ
ಆನೇಕಲ್ ಉಪವಿಭಾಗದ ಹೆಬ್ಬಗೋಡಿ ಠಾಣಾ ವ್ಯಾಪ್ತಿಯ ಶಿಕಾರಿಪಾಳ್ಯದ ಮೊಹಮ್ಮದ್ ಅಬ್ಬಾಸ್ ಅವರ ಪುತ್ರ ಮೊಹಮ್ಮದ್ ಆಸೀಫ್ (10)ನನ್ನು ಹಣಕ್ಕಾಗಿ ಅಪಹರಣ ಮಾಡಿ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದವನನ್ನು ಹೆಬ್ಬಗೋಡಿ ಇನ್‌ಸ್ಪೆಕ್ಟರ್ ಗೌತಮ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ. ಕೊಲೆ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಅಸ್ಸಾಂಗೆ ತೆರಳಿ ಆರೋಪಿ ಮೊಹಮ್ಮದ್ ಜಾವಿದ್ ಅಲಂ(26) ನನ್ನು ಬಂಧಿಸಿದೆ.
ಜಮೀನು ವ್ಯಾಜ್ಯದಲ್ಲಿ ಕೊಲೆ: ಅತ್ತಿಬೆಲೆ ಠಾಣಾ ವ್ಯಾಪ್ತಿಯ ಬಳಗಾರನಹಳ್ಳಿಯ ಬಳಿ ಗೂಡ್ಸ್ ವಾಹನದ ಚಾಲಕ ಬಿದರಗುಪ್ಪೆ ನಿವಾಸಿ ಸೋಮಶೇಖರ್‌ನನ್ನು ಇತ್ತೀಚೆಗೆ ಕೊಲೆ ಮಾಡಲಾಗಿತ್ತು. ಇನ್‌ಸ್ಪೆಕ್ಟರ್ ವಿಶ್ವನಾಥ್ ನೇತೃತ್ವದ ತಂಡ ತನಿಖೆ ನಡೆಸಿದ್ದು, ಅದೇ ಗ್ರಾಮದ ಆರೋಪಿ ಸತ್ಯನಾರಾಯಣ್ ಹಾಗೂ ಕೊಲೆಯಾದ ಸೋಮಶೇಖರ್ ನಡುವೆ ಜಾಗದ ವಿಚಾರವಾಗಿ ಗಲಾಟೆ ನಡೆಯುತ್ತಿತ್ತು. ಅದೇ ಉದ್ದೇಶಕ್ಕೆ ಸುಪಾರಿ ನೀಡಿ ಸೋಮಶೇಖರ್‌ನನ್ನು ಕೊಲೆ ಮಾಡಿಸಿರುವುದು ತನಿಖೆ ವೇಳೆ ತಿಳಿದು ಬಂದಿದ್ದು, ಆರೋಪಿಗಳಾದ ಸತ್ಯನಾರಾಯಣ್(52), ಕೋಲಾರ ಜಿಲ್ಲೆಯ ವೆಮಗಲ್ಲಿನ ರಾಮಸಂದ್ರದ ಅಂಬರೀಶ್(35), ಮಂಗಾಪುರದ ನಿವಾಸಿ ಶಾಂತರಾಜು(40), ರಾಂಪುರದ ಲಕ್ಷ್ಮೀನಾರಾಯಣ(52), ಮಾಲೂರು ನಿವಾಸಿ ಸಂತೋಷ್(39), ಗುಡ್ಡನಹಳ್ಳಿಯ ನಂದೀಶ್(40), ಬೆಂಗಳೂರಿನ ಕಲ್ಕೆರೆಯ ಸುಬ್ರಹ್ಮಣ್ಯ(50) ಅವರನ್ನು ಬಂಧಿಸಲಾಗಿದೆ.