ಚಿತ್ರದುರ್ಗ: ಪೌರ ಕಾರ್ಮಿಕರನ್ನು ಕಾಯಂಗೊಳಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಪೌರ ನೌಕರರ ಜಿಲ್ಲಾ ಮತ್ತು ತಾಲೂಕು ಸಂಘದಿಂದ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಗುರುವಾರ ಮೂರನೇ ದಿನಕ್ಕೆ ಕಾಲಿಡಲಿದೆ.
ಪೌರ ಕಾರ್ಮಿಕರು ಹಾಗೂ ಪೌರ ನೌಕರರು ನಗರಸಭೆ ಮುಂಭಾಗದ ಗೇಟ್ ಬಂದ್ ಮಾಡುವ ಮೂಲಕ ಬುಧವಾರ ರಸ್ತೆಯಲ್ಲೇ ಮುಷ್ಕರ ನಡೆಸಿದರು.
ಸಂಘದ ತಾಲೂಕು ಅಧ್ಯಕ್ಷೆ ರೇಣುಕಾ ಮಾತನಾಡಿ, ಹೊರ ಗುತ್ತಿಗೆ ಪದ್ಧತಿ ಸ್ಥಗಿತಗೊಳಿಸಿ, ಪೌರ ಕಾರ್ಮಿಕರನ್ನು, ನೌಕರರನ್ನು ಕಾಯಂಗೊಳಿಸಬೇಕು. ಜೀವನ ಭದ್ರತೆ ಇಲ್ಲದೆ, ಅನೇಕ ವರ್ಷಗಳಿಂದಲೂ ಕಾರ್ಯನಿರ್ವಹಿಸುತ್ತಿರುವ ಎಲ್ಲರನ್ನೂ ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಇಲ್ಲದಿದ್ದರೆ, ಮುಷ್ಕರ ಹಿಂಪಡೆಯುವುದಿಲ್ಲ ಎಂದರು.
ಮೇ 29ರಂದು ಜಿಲ್ಲೆಯ ಎಲ್ಲ ತಾಲೂಕುಗಳ ಹೊರ ಗುತ್ತಿಗೆ ನೌಕರರು ಧರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಗರದಲ್ಲಿ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಪುನ ನಗರಸಭೆ ಆವರಣದಲ್ಲಿ ಧರಣಿ ಮುಂದುವರಿಸುವುದಾಗಿ ತಿಳಿಸಿದರು.
ನಗರಸಭೆ ಉಪಾಧ್ಯಕ್ಷೆ ಶ್ರೀದೇವಿ, ದಸಂಸ ಜಿಲ್ಲಾಧ್ಯಕ್ಷ ಸಿ.ಎಚ್.ಮಂಜುನಾಥ್, ಮುಖಂಡರಾದ ರಾಜಣ್ಣ, ಜಗದೀಶ್, ಸಂಘದ ತಾಲೂಕು ಉಪಾಧ್ಯಕ್ಷ ಆರ್.ನವೀನ್, ಪದಾಧಿಕಾರಿಗಳಾದ ಪುಟ್ಟಪ್ಪ, ಮೋಕ್ಷದಾಯಿನಿ, ನವೀನ್, ರವಿಚಂದ್ರ ಇತರರಿದ್ದರು.