ಜಿಲ್ಲೆ

ಮೂರನೇ ದಿನಕ್ಕೆ ಕಾಲಿಟ್ಟ ಧರಣಿ

ಗುಂಡ್ಲುಪೇಟೆ: ಕಾಡಾನೆಗಳ ದಾಳಿ ತಪ್ಪಿಸುವಲ್ಲಿ ವಿಫಲರಾದ ಅರಣ್ಯ ಇಲಾಖೆ ವಿರುದ್ಧ ರೈತರು ಕೈಗೊಂಡಿರುವ ಪ್ರತಿಭಟನೆ ಎರಡನೇ ದಿನವಾದ ಬುಧವಾರವೂ ಮುಂದುವರಿದಿತ್ತು.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ವಲಯದ ಕಾಡಂಚಿನ ಗ್ರಾಮಗಳಲ್ಲಿ ಪ್ರತಿ ದಿನವೂ ಕಾಡಾನೆಗಳು ದಾಳಿ ನಡೆಸುತ್ತಿರುವುದರಿಂದ ಬೇಸತ್ತ ರೈತರು ಮಂಗಳವಾರದಿಂದ ಅರಣ್ಯ ಇಲಾಖೆಯ ಹೊಸಪುರ ಕ್ಯಾಂಪ್ ಎದುರು ಅಹೋರಾತ್ರಿ ಪ್ರತಿಭಟನೆ ಆರಂಭಿಸಿದ್ದರು.

ರೈತ ಸಂಘದ ತಾಲೂಕು ಅಧ್ಯಕ್ಷ ವೀರನಪುರ ನಾಗಪ್ಪ ಮಾತನಾಡಿ, ಓಂಕಾರ ಅರಣ್ಯ ವಲಯ ವ್ಯಾಪ್ತಿಯ ಹೊಸಪುರ ಸುತ್ತ ಕಾಡುಪ್ರಾಣಿಗಳ ಹಾವಳಿ ತಡೆಯಬೇಕು. ಮುಚ್ಚಿ ಹೋಗಿರುವ ಕಂದಕಗಳನ್ನು ದುರಸ್ತಿ ಮಾಡಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದರೂ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಆಗಮಿಸಿಲ್ಲ. ಇಂತಹ ಅಧಿಕಾರಿಗಳ ವಿರುದ್ಧ ಅರಣ್ಯ ಸಚಿವರು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಹೊಸಪುರ ಸುತ್ತಲಿನ ಕಂದಕಗಳಲ್ಲಿ ತುಂಬಿರುವ ಹೂಳು ತೆಗೆಸಿ, ಸೋಲಾರ್ ತಂತಿ ಮತ್ತು ರೈಲ್ವೆ ಕಂಬಿ ಬೇಲಿಗಳನ್ನು ನಿರ್ಮಿಸಬೇಕು. ಕಾಡಾನೆ ದಾಳಿಯಿಂದ ನಾಶವಾಗಿರುವ ಫಸಲಿಗೆ ಶೀಘ್ರ ಪರಿಹಾರ ಹಣ ನೀಡಬೇಕು. ಸ್ಥಳಕ್ಕೆ ಡಿಸಿಎಫ್ ಪ್ರಭಾಕರ್ ಬಂದು ರೈತರ ಸಮಸ್ಯೆಗಳಿಗೆ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಬೇಗೂರಿನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಂಘದ ಉಪಾಧ್ಯಕ್ಷ ಮರಿಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಪುಟ್ಟಣ್ಣ, ಕಮರಹಳ್ಳಿ ಪ್ರಸಾದ್, ವಸಂತ, ಹೊಸಪುರ ಘಟಕ ಉಪಾಧ್ಯಕ್ಷ ಮಹೇಶ್, ಮಹದೇವೇಗೌಡ, ಉಮೇಶ್, ರವಿ, ಸ್ವಾಮಿ, ರಾಮೇಗೌಡ ಇತರರು ಇದ್ದರು.